ನವದೆಹಲಿ,ಏಪ್ರಿಲ್ 02: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮಂಗಳವಾರ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ರೆಡ್ಡಿ ಅವರನ್ನು ಕಡಪಾ ಕ್ಷೇತ್ರದಿಂದ ಕಣಕ್ಕಿಳಿಸಿದ.
ಒಡಿಶಾದ ಎಂಟು ಅಭ್ಯರ್ಥಿಗಳು, ಆಂಧ್ರಪ್ರದೇಶದ ಐದು ಅಭ್ಯರ್ಥಿಗಳು, ಬಿಹಾರದ ಮೂವರು ಮತ್ತು ಪಶ್ಚಿಮ ಬಂಗಾಳದ ಒಬ್ಬ ಅಭ್ಯರ್ಥಿ ಸೇರಿದಂತೆ 17 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದೆ.
ಬಿಹಾರದಲ್ಲಿ ಮಹಾಮೈತ್ರಿಕೂಟದೊಂದಿಗೆ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಕಾಂಗ್ರೆಸ್ ಪಡೆದ ಒಂಬತ್ತು ಸ್ಥಾನಗಳ ಪೈಕಿ, ಕಿಶನ್ಗಂಜ್, ಕತಿಹಾರ್ ಮತ್ತು ಭಾಗಲ್ಪುರ ಅಭ್ಯರ್ಥಿಗಳನ್ನು ಘೋಷಿಸಿದೆ. ಕಿಶನ್ಗಂಜ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರನ್ನು ಕಣಕ್ಕಿಳಿಸಲಾಗಿದ್ದು, ಹಿರಿಯ ನಾಯಕ ತಾರಿಕ್ ಅನ್ವರ್ ಅವರು ಕತಿಹಾರ್ನಿಂದ ಕಣಕ್ಕಿಳಿದಿದ್ದಾರೆ. ಭಾಗಲ್ಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಅಜೀತ್ ಶರ್ಮಾ ಸ್ಪರ್ಧಿಸಲಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡದಿಂದ ಮಾಜಿ ಶಿಕ್ಷಣ ಸಚಿವ ಎಂ.ಎಂ.ಪಲ್ಲಂ ರಾಜು ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಮಾಜಿ ಲೋಕಸಭಾ ಸದಸ್ಯ ಸಂಜಯ್ ಭೋಯ್ ಅವರು 2009 ರಿಂದ 2014 ರವರೆಗೆ ಪ್ರತಿನಿಧಿಸಿದ್ದ ಒಡಿಶಾದ ಬರ್ಗಢದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.