ದಾವಣಗೆರೆ, ಡಿಸೆಂಬರ್ 19: ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನರನ್ನು ಬದಲಾಯಿಸಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಮನವಿ ಮಾಡಿದ್ದು, ಪತ್ರ ಬರೆದಿದ್ದಾರೆ.
ಶಿವಮೊಗ್ಗ PWD ಅಧಿಕಾರಿ ವಿಜಯಕುಮಾರ್ ವರ್ಗಾವಣೆಗೆ ಸಿಎಂ ಒಪ್ಪಿದ್ದರು. ಲೆಕ್ಕಾಧಿಕಾರಿ ವಿಜಯ್ಕುಮಾರ್ ದಾವಣಗೆರೆಗೆ ವರ್ಗಾವಣೆ ಆಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ದಾವಣಗೆರೆ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಐ.ಎಸ್.ಓಡೆನಪುರರನ್ನು ಉದ್ದೇಶಪೂರ್ವಕವಾಗಿ ಹುದ್ದೆಯಿಂದ ಬಿಡುಗಡೆಗೊಳಿಸಿಲ್ಲ. ಸರ್ಕಾರಿ ನೌಕರರ ಚುನಾವಣೆಯಲ್ಲಿ ಓಡೆನಪುರ ಗೆದ್ದು ಅಧ್ಯಕ್ಷರಾಗಿದ್ದಾರೆ. ಇವರು ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋತಿದ್ದಾರೆ. ಇದು ಬಿಜೆಪಿಯವರು ಹಾಗೂ ಮಲ್ಲಿಕಾರ್ಜುನ್ ಅವರ ಹೊಂದಾಣಿಕೆ ರಾಜಕೀಯ. ಇದರಿಂದಾಗಿ ಕೂಡಲೇ ದಾವಣಗೆರೆ ಉಸ್ತುವಾರಿ ಸಚಿವರ ಬದಲಾವಣೆ ಮಾಡಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.