ಚಿಕ್ಕಬಳ್ಳಾಪುರ, (ಜೂನ್.5): ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಡಾ. ಕೆ.ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿ ಎಂ.ಎಸ್.ರಕ್ಷಾರಾಮಯ್ಯ ವಿರುದ್ದ 1,62,099 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸ್ಥಾನಕ್ಕೆ ಯಾವಾಗ ರಾಜೀನಾಮೆ ನೀಡುತ್ತಾರೆ ಎಂಬ ಚರ್ಚೆಗಳು ಜೋರಾಗಿಯೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಟ್ರೋಲ್ ಆಗುತ್ತಿದ್ದಾರೆ. ಇದರ ಮಧ್ಯೆ ಪ್ರದೀಪ್ ಈಶ್ವರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಕಾರಣ ಅವರ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ.
ಏನೇ ಮಾಡಿದರೂ ಸುಧಾಕರ್ ಈ ಲೋಕಸಭಾ ಚುನಾವಣೆಯಲ್ಲೂ ಗೆಲ್ಲಲ್ಲ ಎಂದು ಪ್ರದೀಪ್ ಈಶ್ವರ್ ಭವಿಷ್ಯ ಹೇಳುತ್ತಲೇ ಬಂದಿದ್ದರು. ಪ್ರಚಾರ ಸಭೆಗಳಲ್ಲಿ, ಹೋದರಲ್ಲಿ ಬಂದಲ್ಲಿ ಇದೇ ಡೈಲಾಗ್ ಹೊಡೆಯುತ್ತಿದ್ದರು. ಅಲ್ಲದೇ ಇನ್ನೊಂದೆಜ್ಜೆ ಮುಂದೆ ಹೋಗಿ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ಗಿಂತ ಒಂದೇ ಒಂದು ಹೆಚ್ಚು ಮತ ತೆಗೆದುಕೊಂಡರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಹಾಗೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಜೋಶ್ನಲ್ಲಿ ಸವಾಲು ಹಾಕಿದ್ದರು. ಆದ್ರೆ, ಇದೀಗ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲೇ 20,941 ಮತಗಳ ಮುನ್ನಡೆಯನ್ನು ಡಾ ಕೆ ಸುಧಾಕರ್ ಸಾಧಿಸಿದ್ದಾರೆ. ಇದು ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಳಿಕ ಅತಿಹೆಚ್ಚು ಲೀಡ್ ಬಂದಿಉವುದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲೇ.
ಪ್ರದೀಪ್ ಈಶ್ವರ್ ರಾಜೀನಾಮೆ ಯಾವಾಗ? ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಪ್ರದೀಪ್ ಈಶ್ವರ್ ಆಡಿದ್ದ ರಾಜೀನಾಮೆ ಮಾತಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಟ್ರೋಲ್ ಮಾಡಲಾಗುತ್ತಿದ್ದು, ಡೈಲಾಗ್ ಕಿಂಗ್ ರಾಜೀನಾಮೆ ಯಾವಾಗ ಅಂತೆಲ್ಲಾ ನೆಟ್ಟಿಗರು ಕೇಳುತ್ತಿದ್ದಾರೆ. ಇದರ ಮಧ್ಯೆ ಇದೀಗ ಪ್ರದೀಪ್ ಈಶ್ವರ್ ಅವರ ಹೆಸರಿನ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಆದ್ರೆ, ಈ ಪತ್ರ ನಕಲಿ ಎಂದು ಸ್ವತಃ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಿದ್ದಾರೆ.