ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಅಮೆರಿಕದ ಮಧ್ಯಸ್ಥಿಕೆ, ಈ ವಿಚಾರದ ಬಗ್ಗೆ ಹಾಗೂ ರಾಷ್ಟ್ರೀಯ ಭದ್ರತೆ ನಿರ್ವಹಣೆ ಕುರಿತಂತೆ ಕೇಂದ್ರ ಸರ್ಕಾರದ ಮೌನ ವಹಿಸಿರುವುದನ್ನು ಪ್ರಶ್ನಿಸಿ ದೇಶಾದ್ಯಂತ 15 ರಾಜ್ಯಗಳಲ್ಲಿ ಮೇ 20ರಿಂದ 30ರವರೆಗೆ ಜೈ ಹಿಂದ್ ಸಭೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜೈ ಹಿಂದ್ ಸಭೆಗಳಲ್ಲಿ ಮಾಜಿ ಹಿರಿಯ ಸೇನಾಧಿಕಾರಿಗಳು, ಪಕ್ಷದ ನಾಯಕರು ಮತ್ತು ಸಾರ್ವಜನಿಕರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೈ ಹಿಂದ್ ಸಭೆಗಳನ್ನು ನಡೆಸಲಿದ್ದು, ನಮ್ಮ ಸೇನೆಯ ಶೌರ್ಯ ಮತ್ತು ಯಶಸ್ಸಿಗೆ ನಮನ ಸಲ್ಲಿಸಲಾಗುವುದು. ಈ ವೇಳೆ, ಭದ್ರತೆ ಕೊರತೆ, ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಭದ್ರತೆ ನಿರ್ವಹಣೆ ಹಾಗೂ ನಮ್ಮ ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಅಮೆರಿಕದ ಭಾಗಿಯಾಗುವಿಕೆ ವಿಚಾರದ ಕುರಿತು ಪ್ರಶ್ನೆ ಮಾಡಲಾಗುವುದು ಎಂದಿದ್ದಾರೆ.
ಮೇ 20ರಿಂದ 30ರವರೆಗೆ ದೆಹಲಿ, ಬಾರ್ಮರ್, ಶಿಮ್ಲಾ, ಹಲ್ದ್ವಾನಿ, ಪಾಟ್ನಾ, ಜಬಲ್ಪುರ, ಪುಣೆ, ಗೋವಾ, ಬೆಂಗಳೂರು, ಕೊಚ್ಚಿ, ಗುವಾಹಟಿ, ಕೋಲ್ಕತ್ತಾ, ಹೈದರಾಬಾದ್, ಭುವನೇಶ್ವರ ಮತ್ತು ಪಠಾಣ್ಕೋಟ್ನಲ್ಲಿ ಈ ಸಭೆಗಳು ನಡೆಯಲಿವೆ. ಇದರಲ್ಲಿ ನಿವೃತ್ತ ಯೋಧರು, ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ವೇಣುಗೋಪಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದೇ ವೇಳೆ, ಆಪರೇಷನ್ ಸಿಂಧೂರವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಯಶಸ್ವಿ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದರು. ಆದರೆ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಅದನ್ನು ಪ್ರಶ್ನಿಸಿ ದೇಶದ ಹಲವೆಡೆ ಸಮಾವೇಶ ನಡೆಸುತ್ತಿರುವುದಾಗಿ ಕಾಂಗ್ರೆಸ್ ಹೇಳಿದೆ.
ಬುಧವಾರ ಈ ಕುರಿತು ಜಂಟಿ ಪತ್ರಿಕಾಗೋಷ್ಟಿ ನಡೆಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹಿರಿಯ ನಾಯಕರು, ಬಿಜೆಪಿಯು ಈ ಸೇನಾ ಕಾರ್ಯಾಚರಣೆಯನ್ನು ಬ್ರಾಂಡ್ ಆಗಿ ಬಿಂಬಿಸುವ ಪ್ರಯತ್ನ ನಡೆಸಿದೆ. ಇದು ದೇಶದ ಸೇನೆಯ ಕಾರ್ಯಾಚರಣೆ ಎಂದು ಪ್ರತಿಪಾದಿಸಿದ್ದಾರೆ.