ಬೆಳಗಾವಿ,03: ಕಾಂಗ್ರೆಸ್ ಪಕ್ಷ ಈ ದೇಶದ ರೈತರ, ಬಡವರ ಹಾಗೂ ವಿಶೇಷವಾಗಿ ಮಹಿಳೆಯರಿಗೋಸ್ಕರ್ ಸಾಕಷ್ಟು ಯೋಜನೆಗಳನ್ನು ಜಾರಿಗೆ ಮಾಡಿದೆ. ಹೀಗಾಗಿ ಮೇ.07 ರಂದು ನಡೆಯಲಿರುವ ಮತದಾನದಲ್ಲಿ ನನ್ನ ಕ್ರಮ ಸಂಖ್ಯೆ 2ಕ್ಕೆ ಮತ ನೀಡುವ ಮೂಲಕ ಜನ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು.
ರಾಯಭಾಗ ವಿಧಾನಸಭಾ ಕ್ಷೇತ್ರದ ಕಂಕಣವಾಡಿ ಹಾಗೂ ಕುಡುಚಿ ಕ್ಷೇತ್ರದ ಮುಗಳಖೋಡ ಹಾಗೂ ಹಿಡಿಕಲ್ ಗ್ರಾಮದಲ್ಲಿ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ನಮ್ಮ ದೇಶದ ಪ್ರಧಾನಿಯಾಗಿದ್ದ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿಯವರು ಈ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸದ್ಯ ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಕ್ಷ ದೇಶದ ಜನತೆಗೆ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಲಾಗುವುದು. ಆದ್ದರಿಂದ ಎಲ್ಲ ಮತದಾರರು ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಬರೀ ಮುಖ ತೋರಿಸಿ ಕ್ಷೇತ್ರಕ್ಕೆ ಬರದ ಹಾಲಿ ಎಂಪಿ ಅವರಗಿಂತ ಸದಾ ನಮ್ಮ ಜೊತೆ ನಿಂತು ಅಭಿವೃದ್ಧಿಗಳ ಪರ ಕೆಲಸ ಮಾಡುವ ನನಗೆ ಈ ಭಾರಿ ಮತ ಹಾಕಬೇಕು. ಮುಖ್ಯವಾಗಿ ನಮ್ಮ ತಂದೆಯವರಾದ ಸತೀಶ್ ಜಾರಕಿಹೊಳಿ ಹಾಗೂ ಗ್ರಾಮದ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಬರುವ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು. ಮೇ.07 ರಂದು ನಡೆಯಲಿರುವ ಮತದಾನದಲ್ಲಿ ಮತದಾರರು ಅಭಿವೃದ್ದಿ ಪರ ಇರುವ ನನಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಕ್ಷೇತ್ರದಲ್ಲೇ ಉತ್ತಮ ಶಿಕ್ಷಣ ನೀಡಲು ಕ್ರಮ: ನಮ್ಮ ಕ್ಷೇತ್ರದಲ್ಲಿರುವ ಯುವಕರಿಗೆ ನಮ್ಮ ಕ್ಷೇತ್ರದಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ಇಲ್ಲದರಿಂದ ಬೆಂಗಳೂರು ನಂತಹ ನಗರಗಳಿಗೆ ಹೋಗಿ ಶಿಕ್ಷಣ ಕಲಿತು ಉದ್ಯೋಗ ಹುಡುಕುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಬರುವ ದಿನಗಳಲ್ಲಿ ನಮ್ಮ ಕ್ಷೇತ್ರದಲ್ಲಿರುವ ಯುವಕರಿಗೆ ಹಾಗೂ ಯುವತಿಯರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಮೆಡಿಕಲ್ ಹಾಗೂ ಇಂಜೀನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಮತದಾರರು ನಾನು ಕೂಡಾ ನಿಮ್ಮ ಮನೆ ಮಗಳು ಎಂದು ಭಾವಿಸಿ ಈ ಗ್ರಾಮದ ಹಿರಿಯರು ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಹಾಲಿ ಎಂಪಿಗೆ ತಕ್ಕ ಪಾಠ ಕಲಿಸಿ: ಹಿಂದಿನ ಅವಧಿಯಲ್ಲಿ ಬಿಜೆಪಿಯಿಂದ ಜೊಲ್ಲೆ ಸಂಸದರಾಗಿ ಆಯ್ಕೆಯಾಗಿ ಬಂದರೂ ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಇಲ್ಲಿಯ ಪರಿಸ್ಥಿತಿ ನೋಡಿದರೆ ರೈತರ ಬಗ್ಗೆ ಕಾಳಜಿ ಇಲ್ಲದ ಸಂಸದರಾಗಿದ್ದಾರೆ. ಕ್ಷೇತ್ರಕ್ಕೆ ಬರುವ ಗ್ರಾಮಗಳಲ್ಲಿ ಅಭಿವೃದ್ಧಿ ಮಾಡದೇ ಬರಿ ಚುನಾವಣೆ ಬಂದಾಗ ಮುಖ ತೋರಿಸುವ ಹಾಲಿ ಎಂಪಿಗೆ ಮತದಾರರು ತಕ್ಕ ಪಾಠ ಕಲಿಸಲು ಮುಂದಾಗಬೇಕು. ನಾನು ಸದಾ ನಿಮ್ಮ ಕಷ್ಟ, ಸುಖದಲ್ಲಿ ಭಾಗಿಯಾಗಿರುತ್ತೇನೆ. ನೀವು ಕೊಡುವ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ಕೆಲಸ ಮಾಡಿ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ಕೈ ಅಭ್ಯರ್ಥಿ ಪ್ರಿಯಂಕಾಗೆ ಭರ್ಜರಿ ಸ್ವಾಗತ: ಕಂಕಣವಾಡಿ ಗ್ರಾಮಕ್ಕೆ ಆಗಮಿಸಿದ ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಗ್ರಾಮಕ್ಕೆ ಆಗಮಿಸಿದ ನಾಯಕಿಗೆ ಜೆಸಿಬಿಗಳ ಮೂಲಕ ಹೂ ಮಳೆ ಸುರಿಸಿ ಅಭಿಮಾನ ಮೆರೆದರು. ಅಲ್ಲದೇ ಗ್ರಾಮದ ಮಹಿಳೆಯರು ಆರತಿ ಎತ್ತಿ ಹೂ ಮಾಲೆ ಹಾಕುವ ಮೂಲಕ ಸ್ವಾಗತ ಕೋರಿದರು. ಇದಕ್ಕೂ ಮೊದಲು ನಿಪನ್ಯಾಳ ಗ್ರಾಮದಿಂದ ಕಂಕನವಾಡಿವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಅದ್ದೂರಿ ಸ್ವಾಗತ ಕೋರಿದರು. ಈ ಬೈಕ್ ರ್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮದ ಯುವಕರು ಭಾಗವಹಿಸಿದ್ದರು.
ಈ ವೇಳೆ ಅರ್ಜುನ ನಾಯಕವಾಡಿ, ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ, ಸಚಿನ ನಾಯಕವಾಡಿ, ಅಪ್ಪಾಸಾಹೇಬ್, ಸಿದ್ದು ಬಂಡಗಾರ, ಅಪ್ಪಾಸಾಬ ಕುಲಗುಡೆ, ಬಾಳಪ್ಪ ಅರಭಾವಿ, ಡಾ. ಅರವಿಂದ ಗದಾಡಿ, ನಾರಾಯಣ ಅಗ್ನಪ್ಪಗೋಳ, ರಾಜಶ್ರೂಈ ನಾಯಕವಾಡಿ, ನಿರ್ಮಾಲಾ ಪಾಟೀಲ, ಜಯಶ್ರೀ ಮೊಹಿತೆ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.