ಬೆಂಗಳೂರು, ಸೆಪ್ಟೆಂಬರ್ 26: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಯಾರು? ಸದ್ಯ ಈ ಪ್ರಶ್ನೆ ಸ್ವತಃ ಹಾಲಿ ಅಧ್ಯಕ್ಷ ರಾಜು ಕಾಗೆ ಅವರನ್ನೇ ಕಾಡತೊಡಗಿದೆ. ಎಐಸಿಸಿ ಕಳಿಸಿರುವ ಪಟ್ಟಿಯಲ್ಲಿ ಅರುಣ್ ಪಾಟೀಲ್ ಹೆಸರು ಉಲ್ಲೇಖ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನ ಸೌಧದಲ್ಲಿ ಭೇಟಿಯಾಗಿರೋ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ, ಉಂಟಾಗಿರೋ ಗೊಂದಲದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ನಿಮ್ಮನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟಿಲ್ಲ ಎಂದು ಸಿಎಂ ತಿಳಿಸಿದ್ದು, ಪ್ರಿಂಟ್ ಮಿಸ್ಟೆಕ್ ಆಗಿದೆ. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ. ನಿಮ್ಮನ್ನೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸೋದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.


