ಸೋನು ಶ್ರೀನಿವಾಸ್ ಗೌಡಗೆ ಷರತ್ತುಬದ್ಧ ಜಾಮೀನು: ಮಗು ದತ್ತು ಪ್ರಕಣದಲ್ಲಿ ಸೋನು ಕೊಂಚ ರಿಲೀಫ್!

Ravi Talawar
ಸೋನು ಶ್ರೀನಿವಾಸ್ ಗೌಡಗೆ ಷರತ್ತುಬದ್ಧ ಜಾಮೀನು: ಮಗು ದತ್ತು ಪ್ರಕಣದಲ್ಲಿ ಸೋನು ಕೊಂಚ ರಿಲೀಫ್!
WhatsApp Group Join Now
Telegram Group Join Now

ಬೆಂಗಳೂರು,ಏ.05:  ಕಾನೂನು ಬಾಹಿರವಾಗಿ ಸುಮಾರು 8 ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಕನ್ನಡ ಒಟಿಟಿ ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್​ ಗೌಡ ಅಲಿಯಾಸ್‌ ಶಾಂಭವಿ (29)ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಸೋಷಿಯಲ್​ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್​ ಗೌಡ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಬೆಂಗಳೂರು ಗ್ರಾಮಾಂತರ ಸಿಜೆಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಒಂದು ಲಕ್ಷ ರೂ. ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಜಾಮೀನು ಮಂಜೂರಾತಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.

ಸೋನು ಶ್ರೀನಿವಾಸ್ ಗೌಡ ಅವರು ರಾಯಚೂರಿನಲ್ಲಿ 6-8 ವರ್ಷದ ಮಗುವನ್ನು ಪೋಷಕರಿಂದ ದತ್ತು ಪಡೆದಿರುವುದಾಗಿ ಮಾರ್ಚ್​ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜೆ. ಗೀತಾ ಅವರು ಬ್ಯಾಡರಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದರು. ಹಿಂದೂ ದತ್ತು ಕಾಯ್ದೆ ಪ್ರಕಾರ, ದತ್ತು ಪಡೆಯುವ ವ್ಯಕ್ತಿಯ ಅರ್ಹತೆ ಕುರಿತು ಮಾಹಿತಿ ನೀಡಬೇಕು. ಅದಕ್ಕಾಗಿ ಮಕ್ಕಳ ರಕ್ಷಣಾ ಘಟಕ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ, ರಾಜ್ಯ ದತ್ತು ಪ್ರಾಧಿಕಾರಕ್ಕೆ ದತ್ತು ಪಡೆಯುವ ಬಗ್ಗೆ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬೇಕು. ಕೆಲ ಹಂತಗಳನ್ನು ಪಾಲಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಗುವನ್ನು ದತ್ತು ಪಡೆಯಬೇಕು. ಆದರೆ, ಸೋನು ಶ್ರೀನಿವಾಸ್ ಗೌಡ ಅವರು ಮಗುವನ್ನು ದತ್ತು ಪಡೆಯುವಾಗ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಇದೊಂದು ಕಾನೂನು ಬಾಹಿರ ದತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು.

ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, 2024ರ ಮಾ.22ರಂದು ಸೋನು ಶ್ರೀನಿವಾಸ್ ಗೌಡ ಅವರನ್ನು ಮಾಗಡಿ ಮುಖ್ಯರಸ್ತೆಯ ಸಿಂಡಿಕೇಟ್‌ ಲೇಔಟ್‌ನ ಮನೆಯಿಂದ ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಅವರನ್ನು ಮೊದಲಿಗೆ ಹೆಚ್ಚಿನ ವಿಚಾರಣೆಗೆ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತ್ತು. ನಂತರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಇದರಿಂದ ಜೈಲು ಪಾಲಾಗಿದ್ದ ಸೋನು, ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

WhatsApp Group Join Now
Telegram Group Join Now
Share This Article