ಸಮೀಕ್ಷಾ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ: ಡಿಸಿ ನಾಗೇಂದ್ರ ಪ್ರಸಾದ್.ಕೆ

Ravi Talawar
ಸಮೀಕ್ಷಾ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ: ಡಿಸಿ ನಾಗೇಂದ್ರ ಪ್ರಸಾದ್.ಕೆ
WhatsApp Group Join Now
Telegram Group Join Now

ಬಳ್ಳಾರಿ,ಅ.06ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಇನ್ನು ಮೂರು ದಿನ ಬಾಕಿ ಇದ್ದು, ನಗರ, ಸ್ಥಳೀಯ-ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಮನೆಗಳ ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಶನಿವಾರ, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಈವರೆಗೆ ನಡೆದಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದ ಪ್ರಗತಿ ಸಭೆ ನಡೆಸಿ ಅವರು ಮಾತನಾಡಿದರು.
ಬಳ್ಳಾರಿ ನಗರ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಇನ್ನೂ ಪ್ರಗತಿಯಾಗಬೇಕಿದ್ದು, ಗಣತಿದಾರರಿಗೆ ಮಾರ್ಗದರ್ಶನ ನೀಡಬೇಕು. ಹೆಚ್ಚುವರಿ ಸಿಬ್ಬಂದಿ ಅಥವಾ ಈಗಾಗಲೇ ಪೂರ್ಣಗೊಳಿಸಿರುವ ಸಿಬ್ಬಂದಿಗಳಿದ್ದಲ್ಲಿ ನೇಮಿಸಿಕೊಳ್ಳಬೇಕು ಎಂದು ನೋಡೆಲ್ ಅಧಿಕಾರಿಗಳಿಗೆ ನಿರ್ದೇಶನ  ನೀಡಿದರು.
ಜೆಸ್ಕಾಂ ಇಲಾಖೆಯ ಮೀಟರ್ ರೀಡರ್ ಗಳು ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಕಟ್ಟಡಗಳಿಗೂ ಯುಹೆಚ್‌ಐಡಿ ಸ್ಟೀಕರ್ ಅಂಟಿಸಿದ್ದು, ಇದರಿಂದ ಗಣತಿದಾರರಿಗೆ ಸಮೀಕ್ಷಾ ಕಾರ್ಯಕ್ಕೆ ತೊಂದರೆಯಾಗಿದೆ. ಹಾಗಾಗಿ ಮೀಟರ್ ರೀಡರ್ ಗಳು ಗಣತಿದಾರರಿಗೆ ಪೂರಕ ಮನೆಗಳನ್ನು ತೋರಿಸಲು ಹಾಗೂ ಅವರ ಜೊತೆ ತೆರಳುವಂತೆಯೂ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ತಾಲ್ಲೂಕುವಾರು ನೇಮಿಸಿದ ನೋಡೆಲ್ ಅಧಿಕಾರಿಗಳಿಂದ ಆಯಾ ಸ್ಥಳೀಯ-ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿಯಿರುವ ಮನೆಗಳ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಯವರು, ಇರುವ ಕಾಲಾವಧಿಯಲ್ಲಿ ತ್ವರಿತವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಸಹಾಯಕ ಆಯುಕ್ತ ಪಿ.ಪ್ರಮೋದ್, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಜೆಸ್ಕಾಂ  ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article