ಬೆಂಗಳೂರು, ಜುಲೈ 27: ಬೇರೆ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ಗೆ ಯಾವುದೇ ನೋಟಿಸ್ ಕೊಟ್ಟಿಲ್ಲ ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆ.
ಪ್ರಕರಣ ಬಗ್ಗೆ ಮಾಹಿತಿ ಸಂಗ್ರಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ 12 ಜನರಿಗೆ ಮಾಂಸ ಮಾರಾಟದ ಲೈಸೆನ್ಸ್ ಕೊಟ್ಟಿದ್ದೇವೆ. ಅವರನ್ನ ಭೇಟಿ ನೀಡಿ ಮಾಹಿತಿ ನೀಡುವುದಕ್ಕೆ ಹೇಳಿದ್ದೇವೆ. ಒಂದು ವೇಳೆ ಇಂದು ಆ 12 ಜನ ಹಾಜರಾಗದಿದ್ದರೆ ನೋಟಿಸ್ ಕೊಡುತ್ತೇವೆ. ವಿಚಾರಣೆಗೆ ಬಾರದಿದ್ದರೆ 12 ಜನರ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಟನ್ಪೇಟೆ ಠಾಣೆಯಲ್ಲಿ ಪ್ರತ್ಯೇಕವಾಗಿ 3 ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ರಮವಾಗಿ ಮಾಂಸ ಮಾರಾಟದ ಬಗ್ಗೆ, ಗುಂಪುಗೂಡಿ ಗಲಾಟೆ ಮಾಡಿದ್ದ ಆರೊಪದಡಿ ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ವಿರುದ್ಧ ಮೂರನೇ ಎಫ್ಐಆರ್ ದಾಖಲಾಗಿದೆ.