ಹಸಿರು ಟಾವೆಲ್‌ಗೆ ಉಸಿರು ತಂದ ರೈತ ನಾಯಕ ಶ್ರೀ ಬಾಬಾಗೌಡ ಪಾಟೀಲರ ಸ್ಮರಣಾಂಜಲಿ

Hasiru Kranti
ಹಸಿರು ಟಾವೆಲ್‌ಗೆ ಉಸಿರು ತಂದ ರೈತ ನಾಯಕ ಶ್ರೀ ಬಾಬಾಗೌಡ ಪಾಟೀಲರ ಸ್ಮರಣಾಂಜಲಿ
WhatsApp Group Join Now
Telegram Group Join Now

ಈ ದೇಶದ ಬೆನ್ನೆಲುಬಾದ ರೈತನ ಹಕ್ಕುಗಳಿಗಾಗಿ ಜೀವನಪೂರ್ತಿ ಹೋರಾಡಿದ, ಉತ್ತರ ಕರ್ನಾಟಕದ ಪ್ರಬಲ ರೈತ ನಾಯಕ ಹಾಗೂ ಶಕ್ತಿಶಾಲಿ ವಾಗ್ಮಿ ಶ್ರೀ ಬಾಬಾಗೌಡ ಪಾಟೀಲರು ನಮ್ಮನ್ನು ಅಗಲಿ ಒಂದು ವರ್ಷ ಪೂರೈಸಿದೆ. ಆದರೆ ಅವರು ಬಿತ್ತಿದ ಹೋರಾಟದ ಬೀಜಗಳು ಇಂದು ಹೆಮ್ಮರವಾಗಿ ಬೆಳೆದು, ರೈತಪರ ಚಳುವಳಿಗಳಿಗೆ ದಿಕ್ಕು ತೋರಿಸುತ್ತಿವೆ.
ಸ್ವಾತಂತ್ರ್ಯ ನಂತರ ದೀನ–ದಲಿತರು, ಕಾರ್ಮಿಕರ ಹೋರಾಟಗಳೊಂದಿಗೆ ರೈತರನ್ನೂ ಒಗ್ಗೂಡಿಸಿ, ಅವರ ಬೆವರ ಹನಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂದು ಧ್ವನಿಯೆತ್ತಿದವರು ಬಾಬಾಗೌಡ ಪಾಟೀಲರು. ನಂಜುಂಡಸ್ವಾಮಿಯವರು, ಸುಂದರೇಶರು, ಪುಟ್ಟಣ್ಣರವರು, ರುದ್ರಪ್ಪನವರು ಸೇರಿದಂತೆ ಅನೇಕ ರೈತ ನಾಯಕರೊಂದಿಗೆ ಕೈಜೋಡಿಸಿ, ಆಳುವ ಸರ್ಕಾರಗಳ ವಿರುದ್ಧ ಹೋರಾಟ ನಡೆಸಿ ರೈತನ ರೆಟ್ಟೆಗೆ ಬಲ ತುಂಬಿದರು.
ರೈತ ಮತ್ತು ಅವನ ಅವಲಂಬಿತ ಕುಟುಂಬ ನೆಮ್ಮದಿಯಾಗಿ ಬದುಕಬೇಕಾದರೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು, ರೈತ ವಿರೋಧಿ ಕಾನೂನುಗಳಿಗೆ ಮನ್ನಣೆ ಸಿಗಬಾರದು ಎಂಬುದು ಅವರ ಹೋರಾಟದ ಮೂಲ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಅವರು ಬೀದಿಗಿಳಿದು ಚಳುವಳಿ ನಡೆಸಿದಾಗ, ಜನರು ಬುತ್ತಿಗಂಟು ಸಮೇತ ಅವರ ಜೊತೆಗೆ ನಿಂತರು.
ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಗ್ರಾಮೀಣ ರಸ್ತೆ ಯೋಜನೆಯನ್ನು ಜಾರಿಗೆ ತಂದರು. ದಿವಂಗತ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ಮಹತ್ವದ ಹುದ್ದೆ ಹೊಂದಿದ್ದರೂ, ಅವರು ತಮ್ಮ ಹಳ್ಳಿಯ ನಿತ್ಯ ಕೃಷಿ ಕಾಯಕದಿಂದ ಎಂದಿಗೂ ದೂರ ಉಳಿಯಲಿಲ್ಲ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ, ರೈತ ಚಳುವಳಿಗಳನ್ನು ನಿರಂತರವಾಗಿ ಮುಂದುವರೆಸಿದರು.
ಮರಣದ ಮುನ್ನಿನ ವರ್ಷಗಳಲ್ಲಿ ರೈತ ಸಂಘದ ಹಿಂದಿನ ಹೋರಾಟಗಳನ್ನು ನೆನಪಿಸುವಂತಹ ತೀವ್ರ ಪ್ರತಿಭಟನೆಗಳು ಹಾಗೂ ಪ್ರಭಾವಶಾಲಿ ಭಾಷಣಗಳ ಮೂಲಕ ಮತ್ತೆ ರೈತನ ಕೂಗಿಗೆ ಧ್ವನಿಯಾದರು.
ಇಂದು ಅವರ ಸ್ವಗ್ರಾಮ ಚಿಕ್ಕಬಾಗೇವಾಡಿಯಲ್ಲಿ ಸ್ಮರಣಾ ದಿನಾಚರಣೆ ನಡೆಯುತ್ತದೆ, ಅನೇಕ ರೈತ ನಾಯಕರು, ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಅವರ ಪುತ್ಥಳಿಗೆ ನಮನ ಸಲ್ಲಿಸುತ್ತಾರೆ. ನಮ್ಮೂರಿನ ಹೆಮ್ಮೆಯ ಪುತ್ರನಾದ ಬಾಬಾಗೌಡ ಪಾಟೀಲರು ದೆಹಲಿಯ ಸಂಸತ್ತಿನಲ್ಲಿ ನಮ್ಮೂರಿನ ಹೆಸರನ್ನು ಮೊಳಗಿಸಿದವರು. ಅವರ ಆದರ್ಶಗಳು ಇಂದು ಅನೇಕ ಹೋರಾಟಗಾರರಿಗೆ ಪ್ರೇರಣೆಯಾಗಿ ಉಳಿದಿವೆ.
ಈ ಸಂದರ್ಭದಲ್ಲಿ ಬಾಬಾಗೌಡ ಪಾಟೀಲರ ಆದರ್ಶಗಳನ್ನು ಅಳವಡಿಸಿಕೊಂಡ ಅಭಿಮಾನಿಗಳ ಕಣ್ಣಂಚಿನಲ್ಲಿ ನೆನಪಿನ ಹನಿಗಳು ಕಾಣಿಸಿಕೊಳ್ಳುತ್ತವೆ.

– ವಿನೋದ ರಾ ಪಾಟೀಲ ಚಿಕ್ಕಬಾಗೇವಾಡಿ

WhatsApp Group Join Now
Telegram Group Join Now
Share This Article