ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮೊಘಲರು ಮತ್ತು ದೆಹಲಿ ಸುಲ್ತಾನರ ಎಲ್ಲ ಉಲ್ಲೇಖಗಳನ್ನು ಕೈಬಿಡಲಾಗಿದೆ. ಇದರ ಬದಲು ಭಾರತೀಯ ರಾಜವಂಶಗಳ ಅಧ್ಯಾಯಗಳು, ಪವಿತ್ರ ಭೂಗೋಳ, ಮಹಾ ಕುಂಭಮೇಳದ ಉಲ್ಲೇಖಗಳು ಮತ್ತು ಮೇಕ್ ಇನ್ ಇಂಡಿಯಾ ಮತ್ತು ಬೇಟಿ ಬಚಾವೋ ಬೇಟಿ ಪಡಾವೋದಂತಹ ಭಾರತ ಸರ್ಕಾರದ ಪ್ರಮುಖ ಯೋಜನೆಗಳನ್ನು ಸೇರಿಸಲಾಗಿದೆ.
ಈ ವಾರ ಬಿಡುಗಡೆಯಾದ ಹೊಸ ಪಠ್ಯಪುಸ್ತಕಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCFSE) 2023ಕ್ಕೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ. ಇದು ಭಾರತೀಯ ಸಂಪ್ರದಾಯಗಳು, ತತ್ವ, ಜ್ಞಾನ ವ್ಯವಸ್ಥೆ ಮತ್ತು ಸ್ಥಳೀಯ ಮಹತ್ವದ ಸಂಗತಿಗಳನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವುದಕ್ಕೆ ವಿಶೇಷ ಒತ್ತು ನೀಡಿದೆ.
ಈ ಕುರಿತು ಎನ್ಸಿಇಆರ್ಟಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದು ಪುಸ್ತಕದ ಮೊದಲ ಭಾಗ ಮಾತ್ರ. ಮುಂದೆ ಎರಡನೇ ಭಾಗ ಹೊರಬರಲಿದೆ ಎಂದು ಹೇಳಿದರು. ಕೈಬಿಡಲಾದ ಭಾಗಗಳನ್ನು ಪುಸ್ತಕದ ಎರಡನೇ ಭಾಗದಲ್ಲಿ ಉಳಿಸಿಕೊಳ್ಳಲಾಗುತ್ತದೆಯೇ ಎಂಬುದರ ಕುರಿತು ಅವರು ಮಾಹಿತಿ ನೀಡಲಿಲ್ಲ.
NCERT ಈ ಹಿಂದೆ ಮೊಘಲರು ಮತ್ತು ದೆಹಲಿ ಸುಲ್ತಾನರ ವಿಭಾಗಗಳಿಗೆ ಕತ್ತರಿ ಹಾಕಿತ್ತು. ತುಘಲಕ್ ಆಡಳಿತ, ಖಿಲ್ಜಿಗಳು, ಮಮ್ಲುಕ್ಸ್ ಮತ್ತು ಲೋದಿ ರಾಜವಂಶಗಳ ವಿವರವಾದ ಮಾಹಿತಿ ಮತ್ತು ಮೊಘಲ್ ಸಾಧನೆಗಳ ಕುರಿತ ಎರಡು ಪುಟಗಳ ಮಾಹಿತಿಯನ್ನು 2022ರ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತೆಗೆದುಹಾಕಿತ್ತು. ಪರಿಷ್ಕೃತ ಪುಸ್ತಕಗಳು ಇದೀಗ ಎಲ್ಲ ಹೊಸ ಅಧ್ಯಾಯಗಳನ್ನು ಹೊಂದಿದ್ದು, ಮೊಘಲರು ಮತ್ತು ದೆಹಲಿ ಸುಲ್ತಾನರ ಬಗ್ಗೆ ಯಾವುದೇ ಉಲ್ಲೇಖಗಳನ್ನು ಹೊಂದಿಲ್ಲ.
ಸಮಾಜ ವಿಜ್ಞಾನ ಪಠ್ಯಪುಸ್ತಕ ‘ಎಕ್ಸ್ಪ್ಲೋರಿಂಗ್ ಸೊಸೈಟಿ:ಇಂಡಿಯಾ ಆ್ಯಂಡ್ ಬಿಯಾಂಡ್’ನಲ್ಲಿ ಪ್ರಾಚೀನ ಭಾರತೀಯ ರಾಜವಂಶಗಳಾದ ಮಗಧ, ಮೌರ್ಯ, ಶುಂಗ ಮತ್ತು ಶಾತವಾಹನ ಹೀಗೆ ಭಾರತೀಯ ನೀತಿಯ ಮೇಲೆ ಕೇಂದ್ರೀಕರಿಸಿದ ಹೊಸ ಅಧ್ಯಾಯಗಳಿವೆ. ಪುಸ್ತಕದ ಮತ್ತೊಂದು ಹೊಸ ಆವೃತ್ತಿಯು ‘ಭೂಮಿಯು ಹೇಗೆ ಪವಿತ್ರ’ ಎಂಬ ಅಧ್ಯಾಯ ಹೊಂದಿದೆ. ಇದರಲ್ಲಿ ಇಸ್ಲಾಂ, ಕ್ರಿಶ್ಚಿಯನ್ , ಜುಡಾಯಿಸಂ ಮತ್ತು ಝೋರಾಸ್ಟ್ರಿಯನ್ , ಹಿಂದೂ, ಬೌದ್ಮ ಮತ್ತು ಸಿಖ್ ಧರ್ಮಗಳಿಗೆ ಭಾರತದಾದ್ಯಂತ ಮತ್ತು ಹೊರಗಿನ ಪವಿತ್ರ ಸ್ಥಳಗಳು ಮತ್ತು ತೀರ್ಥಯಾತ್ರೆಗಳ ಕುರಿತ ವಿಚಾರಗಳಿವೆ.
ಇದರಲ್ಲಿರುವ ಅಧ್ಯಾಯವೊಂದಲ್ಲಿ 12 ಜ್ಯೋತಿರ್ಲಿಂಗಗಳು, ಚಾರ್ ಧಾಮ್ ಯಾತ್ರೆ ಮತ್ತು ‘ಶಕ್ತಿ ಪೀಠಗಳು’ ನಂತಹ ಸ್ಥಳಗಳ ಜಾಲಗಳನ್ನು ವಿವರಿಸುವ ‘ಪವಿತ್ರ ಭೂಗೋಳ’ ದಂತಹ ಪರಿಕಲ್ಪನೆಗಳನ್ನು ಪರಿಚಯಿಸಲಾಗಿದೆ. ಶ್ರೇಷ್ಠ ನದಿ ಸಂಗಮಗಳು, ಪರ್ವತಗಳು ಮತ್ತು ಪವಿತ್ರ ಕಾಡುಗಳಂತಹ ಸ್ಥಳಗಳನ್ನೂ ಕೂಡಾ ಪಠ್ಯದಲ್ಲಿ ವಿವರಿಸಲಾಗಿದೆ.
ಈ ಪಠ್ಯವು ಭಾರತವನ್ನು ತೀರ್ಥಯಾತ್ರೆಗಳ ಭೂಮಿ ಎಂದು ವಿವರಿಸಿದ ಜವಾಹರಲಾಲ್ ನೆಹರು ಅವರ ಉಲ್ಲೇಖ ಒಳಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಬದರಿನಾಥ ಮತ್ತು ಅಮರನಾಥದ ಹಿಮಾವೃತ ಶಿಖರಗಳಿಂದ ಹಿಡಿದು ದೇಶದ ದಕ್ಷಿಣದ ತುದಿ ಕನ್ಯಾಕುಮಾರಿಯ ಪ್ರಮುಖ ಧಾರ್ಮಿಕ ಸ್ಥಳಗಳ ಮಾಹಿತಿ ಇದೆ.
ವರ್ಣ, ಜಾತಿ ವ್ಯವಸ್ಥೆ ಆರಂಭದಲ್ಲಿ ಸಾಮಾಜಿಕ ಸ್ಥಿರತೆಯನ್ನು ಒದಗಿಸಿದರೆ, ನಂತರ ಅದು ಕಠಿಣವಾಗತೊಡಗಿತು. ಅದರಲ್ಲೂ ವಿಶೇಷವಾಗಿ, ಬ್ರಿಟಿಷ್ ಆಳ್ವಿಕೆಯಲ್ಲಿ ಹೆಚ್ಚು ಅಸಮಾನತೆಗಳಿಗೆ ಕಾರಣವಾಯಿತು ಎಂದು ಪಠ್ಯಪುಸ್ತಕ ಹೇಳುತ್ತದೆ.