ಬೆಂಗಳೂರು: “ನಾನು ನನ್ನ ಅವಧಿಯಲ್ಲಿ 7 ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ನಾವು ಹಲವು ಪ್ರಕರಣ ಸಿಬಿಐಗೆ ಕೊಡುವಂತೆ ಕೇಳಿದ್ದೆವು. ಅವರೇನಾದ್ರು (ಬಿಜೆಪಿಯವರು) ಒಂದಾದ್ರು ಕೊಟ್ಟಿದ್ರಾ?” ಎಂದು ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮದವರು ಮುಡಾ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಸಿಎಂ ನಿರಾಕರಿಸಿದರು. ವಿಧಾನಸೌಧದ ಒಳಗೆ ಪ್ರವೇಶಿಸುವ ಮೆಟ್ಟುಲುಗಳ ಮೇಲೆಯೇ ನಿಂತು ಮಾತನಾಡಿದ ಅವರು, “ಇದು ಸಿಬಿಐಗೆ ಕೊಡುವ ಪ್ರಕರಣ ಅಲ್ಲ. ಆಮೇಲೆ ಬಂದು ಮಾತಾಡುತ್ತೇನೆ” ಎಂದು ತೆರಳಿದರು.
ಇದೇ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, “ಮುಡಾ ನಿವೇಶನ ಹಂಚಿಕೆಗೆ 50:50 ಅನುಪಾತದ ಆದೇಶ ಮಾಡಿದ್ದು, ಈಗ ನಮ್ಮ ಸರ್ಕಾರ ಅಲ್ಲ. ಯಾರ ಕಾಲದಲ್ಲಿ ಸೈಟುಗಳು ಹಂಚಿಕೆ ಆಗಿವೆ?. ಬಿಜೆಪಿ ಕಾಲದಲ್ಲಿ ಒಂದಾದರೂ ಸಿಬಿಐಗೆ ನೀಡಿದ ಉದಾಹರಣೆ ಇದೆಯಾ?. ತನಿಖೆ ನಡೆಯುತ್ತಿದೆ, ತನಿಖೆ ಆದಮೇಲೆ ಎಲ್ಲ ವಿವರ ಹೊರ ಬರುತ್ತದೆ. ನ್ಯಾಯಯುತವಾಗಿ ಹಂಚಿಕೆ ಮಾಡಿದ್ದಕ್ಕೂ ಸಿಬಿಐಗೆ ನೀಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಡಿಸಿಎಂ ಸ್ಥಾನದ ಆಸೆ ಇಲ್ಲ : ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯೂ ಅಲ್ಲ. ಅದರ ಬಗ್ಗೆ ಆಸೆಯೂ ಇಲ್ಲ. ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೇಗುತ್ತೇನೆ. ಹೆಚ್ಚುವರಿ ಡಿಸಿಎಂಗಳ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ಗೆ ಬಿಟ್ಟಿರುವ ವಿಚಾರ. ಸಿಎಂ, ಡಿಸಿಎಂ ಹುದ್ದೆ ಖಾಲಿ ಇಲ್ಲ ಎಂದರು.