ಇಲಾಖೆಗಳ ಖಾತೆಯಲ್ಲಿಯ ಹಣ ಯಾಕೆ ಖರ್ಚು ಮಾಡಿಲ್ಲ: ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಸಿಎಂ ಸಿದ್ದರಾಮಯ್ಯ  

Ravi Talawar
ಇಲಾಖೆಗಳ ಖಾತೆಯಲ್ಲಿಯ ಹಣ ಯಾಕೆ ಖರ್ಚು ಮಾಡಿಲ್ಲ: ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಸಿಎಂ ಸಿದ್ದರಾಮಯ್ಯ  
WhatsApp Group Join Now
Telegram Group Join Now

ಬೆಂಗಳೂರು, ಮೇ 17: ಕೆಲವು ಇಲಾಖೆಗಳ ಖಾತೆಯಲ್ಲಿ ಹಣ ಇದ್ದರೂ ಯಾಕೆ ಖರ್ಚು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. ವಿಧಾನಸೌಧದಲ್ಲಿ ಡಿಸಿಎಂ, ಅಧಿಕಾರಿಗಳು, ಸಚಿವರ ಜತೆ ಸಭೆ ನಡೆಸಿದ ಅವರು, ಬರ ಪರಿಹಾರ ಮತ್ತು ಕುಡಿಯುವ ನೀರಿನ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಇದೇ ವೇಳೆ, ಕೆಲವು ಇಲಾಖೆಗಳಲ್ಲಿ ಸಂಪೂರ್ಣ ಕೆಲಸವಾಗದ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಯಾವ ಇಲಾಖೆಯಿಂದಲೂ ದೂರು ಬರಬಾರದು ಎಂದು‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್​ ಸೂಚನೆ ನೀಡಿದರು. ಬರ ಪರಿಹಾರದ ಬಗ್ಗೆ ಇಂದಿನ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಕಂದಾಯ ಇಲಾಖೆಯ ಅಧಿಕಾರಿಗಳು ಸಿಎಂಗೆ ವಿವರಣೆ ನೀಡಿದರು. 33.50 ಲಕ್ಷ ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗಿದೆ. ಪರಿಹಾರ ನೀಡಿಕೆ ವಿವಿಧ ಹಂತಗಳಲ್ಲಿದೆ. 20.13 ಲಕ್ಷ ರೈತ ಕುಟುಂಬಗಳಿಗೆ ತಲಾ 2400 ರೂ. ನಂತೆ 476.40 ಕೋಟಿ ರೂ. ಗಳನ್ನು ಜೀವನೋಪಾಯಕ್ಕೆ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಬೀಜ ಬಿತ್ತನೆ ಮಾಡಿ ಚಿಗುರದೇ ಒಣಗಿ ಹೋಗಿರುವ ಪ್ರಕರಣಗಳಲ್ಲಿ ಬೆಳೆ ಹಾನಿ ಪರಿಹಾರ ನೀಡುವ ಬಗ್ಗೆ ಎನ್​ಡಿಆರ್​​ಎಫ್ ಮಾರ್ಗಸೂಚಿ ಬದಲಾವಣೆ ಮಾಡುವ ಬಗ್ಗೆ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕೋರಲು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ಉತ್ತಮವಾಗುವ ಎಲ್ಲಾ ಸೂಚನೆ ಇದೆ. ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ಸೂಚನೆ ಇದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು. 53,500 ಕ್ವಿಂಟಾಲ್ ಬಿತ್ತನೆ ಬೀಜ ಅಗತ್ಯವಿದೆ. ಎಲ್ಲಾ ಜಿಲ್ಲೆಗಳಲ್ಲೂ ಬೀಜ ದಾಸ್ತಾನಿದೆ. 26 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅಗತ್ಯವಿದ್ದು, 15 ಲಕ್ಷ ಟನ್ ಲಭ್ಯವಿದೆ. ಬಿತ್ತನೆ ಬೀಜ, ಗೊಬ್ಬರಕ್ಕೆ ರಾಜ್ಯದಲ್ಲಿ ತೊಂದರೆ ಇಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜನ ಸ್ಪಂದನದಲ್ಲಿ ಬಂದ ಅರ್ಜಿಗಳ ಬಗ್ಗೆ ಸಿಎಂ ಮಾಹಿತಿ ಪಡೆದರು. ನಗರಾಭಿವೃದ್ದಿ ಇಲಾಖೆಯಲ್ಲಿ 828 ಅಹವಾಲು ಸ್ವೀಕೃತಿಯಾಗಿದೆ, 554 ಬಾಕಿ ಉಳಿದಿದೆ. ಕಂದಾಯ, ವಸತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಏನು ಮಾಡಲಾಗಿದೆ ಎನ್ನುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಕೇಳಿ ಪಡೆದರು.

ಅರ್ಜಿಗಳ ವಿಲೇವಾರಿ ಮಾಡುವಾಗ ಪರಿಹಾರ ಏಕಾಗಿಲ್ಲ ಎಂದು ಸ್ಪಷ್ಟವಾಗಿ ಬರೆಯಬೇಕಾಗಿದೆ ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಇದೇ ವೇಳೆ, ಈ ತಿಂಗಳೊಳಗೆ ಅರ್ಜಿಗಳ ಇತ್ಯರ್ಥಗೊಳಿಸಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.

WhatsApp Group Join Now
Telegram Group Join Now
Share This Article