ಮನೆ ಮನೆಗೆ ಹೋಗಿ ರಾಜ್ಯದ ಜನರ ಆರೋಗ್ಯ ತಪಾಸಣೆ ನಡೆಸುವ ಅತ್ಯುನ್ನತ ಆರೋಗ್ಯಸೇವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್
ನಾನು 30 ವರ್ಷಗಳಿಂದ ಸಕ್ಕರೆ ಕಾಯಿಲೆಯನ್ನು ನಿರ್ವಹಿಸುತ್ತಿದ್ದೇನೆ: ವ್ಯಾಯಾಮ, ಶಿಸ್ತಿನ ಜೀವನಶೈಲಿಯಿಂದ ಡಯಾಬಿಟಿಕ್ ನಿಯಂತ್ರಿಸಬಹುದು: ಸಿಎಂ
ಸ್ಟಂಟ್ ಹಾಕಿಸಿಕೊಂಡು 24 ವರ್ಷ ಆಯ್ತು: ಅರಾಮಾಗಿ ಎಲ್ಲಾ ಕೆಲಸ, ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೇನೆ: ಸಿಎಂ
ಬೆಂಗಳೂರು ಅ24: ನಾನು 30 ವರ್ಷಗಳಿಂದ ಸಕ್ಕರೆ ಕಾಯಿಲೆಯನ್ನು ನಿರ್ವಹಿಸುತ್ತಿದ್ದೇನೆ: ವ್ಯಾಯಾಮ, ಶಿಸ್ತಿನ ಜೀವನಶೈಲಿಯಿಂದ ಡಯಾಬಿಟಿಕ್ ನಿಯಂತ್ರಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನಾಡಿದರು.
ಸ್ಟಂಟ್ ಹಾಕಿಸಿಕೊಂಡು 24 ವರ್ಷ ಆಯ್ತು. ಪಕ್ಷದ ಕೆಲಸನೂ ಮಾಡ್ತಿದ್ದೀನಿ, ಸರ್ಕಾರದ ಕೆಲಸನೂ ಮಾಡ್ತಿದ್ದೀನಿ, ವ್ಯಾಯಾಮನೂ ಮಾಡ್ತಿದ್ದೀನಿ. ಅರಾಮಾಗಿ ಎಲ್ಲಾ ಕೆಲಸ, ಕಾರ್ಯಗಳಲ್ಲೂ ಭಾಗವಹಿಸುತ್ತಿದ್ದೇನೆ. ಆದರೆ ವೈದ್ಯರು ಹೇಳಿದಂತೆ ಕೇಳುತ್ತೇನೆ. ಹೀಗಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ ಎನ್ನುವ ತಮ್ಮದೇ ಅನುಭವಗಳ ಆರೋಗ್ಯ ಸಂದೇಶ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ “ಗೃಹ ಆರೋಗ್ಯ: ಆರೋಗ್ಯ ಸೇವೆ ಮನೆ ಬಾಗಿಲಿಗೆ” ನೂತನ ಮಹತ್ವದ ಜನಾರೋಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ರೋಗಿಗಳೊಂದಿಗೆ zoom call ನಲ್ಲಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದರು.
ಕಾಯಿಲೆಗಳನ್ನು, ಆರೋಗ್ಯ ಸಮಸ್ಯೆಗಳನ್ನು ಗುಟ್ಟಾಗಿ ಇಟ್ಟು ಅನಾಹುತ ತಂದುಕೊಳ್ಳಬಾರದು. ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಬಡವರಿಗೂ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲು ಸಾಧ್ಯ ಆಗಲಿ ಎನ್ನುವ ಕಾರಣದಿಂದಲೇ ಮನೆಬಾಗಿಲಿಗೆ ಆರೋಗ್ಯ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದರು
ಬಹಳ ಜನರಿಗೆ ವೈದ್ಯರಿಗೆ ತಪಾಸಣೆ ವೆಚ್ಚ ಕೊಡುವುದಕ್ಕೂ ಸಾಧ್ಯವಾಗುವುದಿಲ್ಲ. ಆದರೆ ಇಂಥವರಿಗೂ ಆರೋಗ್ಯದ ಹಕ್ಕು ಇದೆ. ತಪಾಸಣೆಯಿಂದ ಸಾಂಕ್ರಾಮಿಕ ರೋಗಗಳು, ಸಾಂಕ್ರಾಮಿಕವಲ್ಲದ ರೋಗಗಳೂ ಪತ್ತೆಯಾಗುತ್ತವೆ ಎಂದರು.
ಬಹಳ ಜನ ಆರೋಗ್ಯ ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡುವ ಮಹತ್ವದ ಕಾರ್ಯಕ್ರಮ ಆರಂಭಿಸಿದ್ದೇವೆ. ಮನೆ ಬಾಗಿಲಿಗೆ ಆರೋಗ್ಯ ಸವಲತ್ತು ಒದಗಿಸುವ ಗುರಿ ನಮ್ಮದಾಗಿದೆ ಎಂದರು.
ಕ್ಯಾನ್ಸರ್ ಕೂಡಿ ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಶಿಸ್ತಿನ ವ್ಯಾಯಾಮಯುಕ್ತ ಜೀವನಶೈಲಿ ಮುಖ್ಯ ಎಂದರು.
ಒತ್ತಡದ ಜೀವನದಿಂದಲೂ ಕಾಯಿಲೆಗಳು ಬರುತ್ತವೆ. ಈಗ ರಸಾಯನಿಕ ಬಳಸಿದ ಆಹಾರದ ಸೇವನೆ ಹೆಚ್ಚಾಗಿರುವುದರಿಂದಲೂ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ ಎಂದರು.
ಮೊಟ್ಟೆ, ಮೀನು, ಮಾಂಸ ತಿಂದರೆ ಡಾಯಾಬಿಟಿಕ್ ಬರುತ್ತದೆ, ಹೆಚ್ಚುತ್ತದೆ ಎನ್ನುವ ತಪ್ಪುಕಲ್ಪನೆ ಇದೆ. ಹಾಗೇನೂ ಇಲ್ಲ. ಮೊಟ್ಟೆ ಮಾಂಸ ಬಿಟ್ಟು ಬರೀ ಅನ್ನ ತಿಂದರೆ ಹೇಗೆ ? ಬ್ಯಾಲೆನ್ಸ್ ಆಹಾರ ಸೇವನೆ ಮುಖ್ಯ ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ವಿಧಾನ ಪರಿಷತ್ ಸದಸ್ಯರಾದ ಸುಧಾಮ ದಾಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಸೇರಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.