ಬೆಂಗಳೂರು, ಆ.5: ಕ್ರೀಡಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಭಾನುವಾರ ಕೃಷ್ಣಾದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿoದ ಒಲoಪಿಕ್ಸ್, ಪ್ಯಾರಾಲಿoಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ ಗಳಲ್ಲಿ ಪದಕ ವಿಜೇತ 12ಮಂದಿ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿ ಮಾತನಾಡಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 2016-17ರ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಒಲಂಪಿಕ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದ ಸಂದರ್ಭದಲ್ಲಿ, ಒಲಂಪಿಕ್ಸ್, ಏಶ್ಯಾಡ್ ಮತ್ತು ಕಾಮನ್ವೆಲ್ತ್ನಂತಹ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ ಒದಗಿಸುವುದಾಗಿ ಘೋಷಣೆ ಮಾಡಿದ್ದೆ. ಸರ್ಕಾರ ಬದಲಾದ ಬಳಿಕ ಇದು ನೆನೆಗುದಿಗೆ ಬಿದ್ದಿತ್ತು. ಇದೀಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.