ಬೆಂಗಳೂರು, ಮಾರ್ಚ್ 21: ಕರ್ನಾಟಕ ಸರ್ಕಾರವು (Karnataka Govt) ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ (MLAs Salary) ವೇತನವನ್ನು ಶೇ 100 ರಷ್ಟು ಹೆಚ್ಚಿಸಲು ಮುಂದಾಗಿದ್ದು, ಈ ಪ್ರಸ್ತಾವಕ್ಕೆ ರಾಜ್ಯಪಾಲರಿಂದ (Karnataka Governor) ಅನುತಿಯೂ ದೊರೆತಿದೆ. ಕಲಾಪ ವ್ಯವಹಾರಗಳ ಸಲಹಾ ಸಮಿತಿಯ ನಿರ್ಣಯದಂತೆ ‘ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ 2025’ ಕ್ಕೆ ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಹಾಗೂ ಪರಿಷತ್ನಲ್ಲಿ ಸರ್ಕಾರ ಮಂಡಿಸಲಿದ್ದು ಅನುಮೋದನೆ ಪಡೆಯಲಿದೆ. ಪರಿಣಾಮವಾಗಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರ ವೇತನ ಮತ್ತು ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ.
ಎಷ್ಟು ಹೆಚ್ಚಾಗಲಿದೆ ಸಿಎಂ, ಸಚಿವರ ವೇತನ?
ಸಿಎಂ ವೇತನ ತಿಂಗಳಿಗೆ 1.5 ಲಕ್ಷ ರೂ.ಗೆ ಏರಿಕೆಯಾಗಲಿದ್ದು, ಇದು ಶೇ 100 ರ ಹೆಚ್ಚಳವಾಗಿರಲಿದೆ. ಸಚಿವರ ವೇತನ 1.25 ಲಕ್ಷ ರೂ.ಗೆ ಏರಿಕೆಯಾಗಲಿದೆ. ಶಾಸಕರು ಹಾಗೂ ವಿಪಕ್ಷ ನಾಯಕರ ವೇತನ 80 ಸಾವಿರ ರೂ.ಗೆ ಏರಿಕೆಯಾಗಲಿದೆ. ಸಚಿವರ ಮನೆ ಬಾಡಿಗೆ ಭತ್ಯೆ 2.50 ಲಕ್ಷ ರೂ.ಗೆ ಹೆಚ್ಚಾಗಲಿದೆ.
ಶಾಸಕರು ಸೇರಿದಂತೆ ಯಾರ ವೇತನ ಎಷ್ಟು ಹೆಚ್ಚಳ?
ಶಾಸಕರ ವೇತನ 40 ಸಾವಿರ ರೂ.ನಿಂದ 80 ಸಾವಿರ ರೂ.ಗೆ ಹೆಚ್ಚಳವಾಗಲಿದೆ. ಅದರ ಜತೆಗೆ ವಿಧಾನಸಭಾಧ್ಯಕ್ಷ ಮತ್ತು ವಿಧಾನಪರಿಷತ್ ಸಭಾಪತಿ ವೇತನ 75 ಸಾವಿರ ರೂ.ನಿಂದ 1.25 ಲಕ್ಷ ರೂ, ಸಿಎಂ ವೇತನ 75 ಸಾವಿರ ರೂ.ನಿಂದ 1.50 ಲಕ್ಷ ರೂ., ಸಚಿವರ ವೇತನ 60 ಸಾವಿರ ರೂ.ನಿಂದ 1.25 ಲಕ್ಷ ರೂ. ವರೆಗೆ ಹೆಚ್ಚಳವಾಗಲಿದೆ.