ಸಿಎಂ ಚಿನ್ನದ ಪದಕ : ಪಿ.ಎಸ್.ಐ ಕಾಳಿಂಗ. ಎ ಆಯ್ಕೆ – ಅಪಾರ ಸೇವೆಗೆ ರಾಜ್ಯ ಮಟ್ಟದ ಗೌರವ

Hasiru Kranti
ಸಿಎಂ ಚಿನ್ನದ ಪದಕ : ಪಿ.ಎಸ್.ಐ ಕಾಳಿಂಗ. ಎ ಆಯ್ಕೆ – ಅಪಾರ ಸೇವೆಗೆ ರಾಜ್ಯ ಮಟ್ಟದ ಗೌರವ
WhatsApp Group Join Now
Telegram Group Join Now
ಬಳ್ಳಾರಿ 31.: ಪೊಲೀಸ್ ಇಲಾಖೆಯಲ್ಲಿ ನಿಷ್ಠೆ, ಶಿಸ್ತು ಮತ್ತು ಜನಸೇವೆ ಎಂಬ ಮೌಲ್ಯಗಳನ್ನು ಅಕ್ಷರಶಃ ಅನುಸರಿಸಿಕೊಂಡು ಬಂದಿರುವ ಪಿ.ಎಸ್.ಐ ಕಾಳಿಂಗ. ಎ ಅವರು 2025ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದು, ಇದು ಅವರ ಅಪಾರ ಸೇವೆಗೆ ದೊರೆತ ದೊಡ್ಡ ಗೌರವವೆಂದು ಪರಿಗಣಿಸಲಾಗಿದೆ.
ಮೋಕಾ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕಾಳಿಂಗ ಅವರು ಅಪರೂಪದ ಸೇವಾಭಾವದಿಂದ ಜನಮನ ಗೆದ್ದಿದ್ದರು. ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ತನಿಖೆ ನಡೆಸಿ, ದೋಷಿಗಳನ್ನು ಕಾನೂನಿನ ಮುಂದೆ ನಿಲ್ಲಿಸುವಲ್ಲಿ ಅವರು ತೋರಿದ ದೃಢತೆ ಗಮನಾರ್ಹವಾಗಿತ್ತು. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದು, ಠಾಣೆಯನ್ನು ಜನಸ್ನೇಹಿ ಕೇಂದ್ರವನ್ನಾಗಿ ರೂಪಿಸಿದ್ದರು.
ಕಷ್ಟದ ಸಂದರ್ಭಗಳಲ್ಲೂ ಧೈರ್ಯ ಕಳೆದುಕೊಳ್ಳದೆ, ರಾತ್ರಿ-ಹಗಲು ಎನ್ನದೇ ಕರ್ತವ್ಯಕ್ಕೆ ಬದ್ಧರಾಗಿದ್ದ ಕಾಳಿಂಗ ಅವರ ಸೇವೆಯನ್ನು ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳು ಸದಾ ಮೆಚ್ಚಿಕೊಂಡಿದ್ದಾರೆ. ಶಿಸ್ತುಬದ್ಧ ಕಾರ್ಯವೈಖರಿ, ನಿಷ್ಪಕ್ಷಪಾತ ತನಿಖೆ ಮತ್ತು ಮಾನವೀಯ ಮನೋಭಾವವೇ ಅವರನ್ನು ವಿಭಿನ್ನವಾಗಿ ಗುರುತಿಸಿತು.
ಇತ್ತೀಚೆಗೆ ಬಳ್ಳಾರಿ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಅವರು, ಸಂಚಾರ ನಿಯಂತ್ರಣದಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದು ಅಪಘಾತ ತಡೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದಾರೆ.
“ಕಾಳಿಂಗ ಸರ್ ನಮ್ಮಿಗೆ ಅಧಿಕಾರಿ ಮಾತ್ರವಲ್ಲ, ಮಾರ್ಗದರ್ಶಕರೂ ಹೌದು” ಎಂದು ಮೊಕಾ ಪೊಲೀಸ್ ಠಾಣೆಯ ಸಿಬ್ಬಂದಿ ಭಾವುಕರಾಗಿ ಹೇಳಿಕೊಂಡಿದ್ದಾರೆ. ಅವರ ವರ್ಗಾವಣೆಯ ಸಂದರ್ಭದಲ್ಲಿ ಸಿಬ್ಬಂದಿ ಕಂಬನಿ ಮಿಡಿದು ಬೀಳ್ಕೊಟ್ಟಿದ್ದು, ಅವರ ಸೇವೆಯನ್ನು ನೆನೆದು ಕೃತಜ್ಞತೆ ಸಲ್ಲಿಸಿದ್ದಾರೆ.
“ಅವರ ಜೊತೆ ಕೆಲಸ ಮಾಡಿದ ಅನುಭವ ನಮ್ಮ ಜೀವನದ ದೊಡ್ಡ ಪಾಠ. ಪ್ರಾಮಾಣಿಕತೆ ಎಂದರೇನು ಎಂಬುದನ್ನು ಅವರು ತೋರಿಸಿದರು” ಎಂದು ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.
ಕಾಳಿಂಗ ಅವರ ಸಾಧನೆ ಕೇವಲ ವ್ಯಕ್ತಿಗತ ಗೌರವವಲ್ಲ, ಅದು ಸಂಪೂರ್ಣ ಪೊಲೀಸ್ ಇಲಾಖೆಗೆ ಸಿಕ್ಕ ಹೆಮ್ಮೆ. ಅವರ ಅಪಾರ ಸೇವೆ, ಜನಪರ ಧೋರಣೆ ಮತ್ತು ಕರ್ತವ್ಯನಿಷ್ಠೆಗೆ ರಾಜ್ಯ ಸರ್ಕಾರ ನೀಡಿದ ಈ ಗೌರವವು ಇತರರಿಗೆ ಮಾದರಿಯಾಗಿದೆ.
WhatsApp Group Join Now
Telegram Group Join Now
Share This Article