ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳುವರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ, ಮುಡಾ ಅಕ್ರಮ ಆರೋಪಗಳ ನಡುವೆ ಸಿಎಂ ಮತ್ತು ಡಿಸಿಎಂ ಜೊತೆಗೆ ಹಲವು ಸಚಿವರುಗಳು ಕೂಡಾ ರಾಷ್ಟ್ರ ರಾಜಧಾನಿಗೆ ತೆರಳುತ್ತಿರುವುದು ಕುತೂಹಲ ಕೆರಳಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಸಂಜೆ ಭೇಟಿಯಾಗಲಿದ್ದಾರೆ. ಇತ್ತ 10ಕ್ಕೂ ಹೆಚ್ಚು ಸಚಿವರುಗಳೂ ದೆಹಲಿಗೆ ದೌಡಾಯಿಸಿದ್ದಾರೆ. ಪಕ್ಷ ಹಾಗೂ ಸರ್ಕಾರದ ವಿಚಾರವಾಗಿ ಚರ್ಚೆ ನಡೆಯಲಿದೆ ಎಂದು ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ.
ಹೈಕಮಾಂಡ್ ಭೇಟಿ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಾಗೂ ಮುಡಾ ಹಗರಣ ಆರೋಪಗಳ ಬಗ್ಗೆ ಸಿಎಂ ಹಾಗೂ ಡಿಸಿಎಂ ಬಳಿ ಸ್ಪಷ್ಟನೆ ಕೇಳುವ ಸಾಧ್ಯತೆ ಇದೆ. ಮುಡಾ ಹಾಗೂ ವಾಲ್ಮೀಕಿ ನಿಗಮ ಅಕ್ರಮ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆಗೆ ಮುಂದಾಗಿವೆ.
ಲೋಕಸಭೆ ಅಧಿವೇಶನದಲ್ಲೂ ಈ ಹಗರಣಗಳ ಸಂಬಂಧ ಬಿಜೆಪಿ-ಜೆಡಿಎಸ್ ಸಂಸದರು ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ ಭವನದ ಮುಂದೆಯೂ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಮುಜುಗರ ಉಂಟುಮಾಡಿದೆ. ಹೀಗಾಗಿ ಈ ಹಗರಣಗಳ ಸಂಬಂಧ ಸಿಎಂ ಹಾಗೂ ಡಿಸಿಎಂ ಅವರಿಂದ ಹೈಕಮಾಂಡ್ ವಿವರಣೆ ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ, ಜೆಡಿಎಸ್ ಸಂಸದರು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ ಈ ಹಗರಣಗಳನ್ನು ರಾಷ್ಟ್ರೀಯ ಚರ್ಚಾ ವಿಚಾರವಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ತರಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಸಂಪುಟ ಪುನರ್‌ರಚನೆ ಚರ್ಚೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಸಂಪುಟ ಪುನರ್‌ರಚನೆಯ ಚರ್ಚೆಗೂ ಇಂಬು ನೀಡಿದೆ. ನಾಲ್ಕೈದು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಈಗಾಗಲೇ ಚರ್ಚೆ ನಡೆಯುತ್ತಿದೆ. ಇದೇ ಆತಂಕದಲ್ಲಿ ದೆಹಲಿಗೆ ಕೆಲವು ಸಚಿವರುಗಳೂ ದೌಡಾಯಿಸಿದ್ದಾರೆ.
ಈ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಕುರಿತಾಗಿ ಮಧುಸೂಧನ್ ಮಿಸ್ತ್ರಿ ಸಮಿತಿಯ ಸತ್ಯಶೋಧನಾ ವರದಿ ಹೈಕಮಾಂಡ್ ಕೈ ಸೇರಿದೆ. ಈ ವರದಿ ಆಧಾರದಲ್ಲಿ ಹೈಕಮಾಂಡ್ ಕೆಲ ಸಲಹೆ ಸೂಚನೆಗಳೊಂದಿಗೆ ಸಂಪುಟ ಪುನರ್‌ರಚಿಸುವ ಬಗ್ಗೆ ಸೂಚನೆ ನೀಡುವ ಸಾಧ್ಯತೆ ಇದೆ. ಮಿಸ್ತ್ರಿ ಸಮಿತಿ ರಾಜ್ಯದ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದು, ಸಚಿವರ ಕಾರ್ಯವೈಖರಿಯ ಬಗ್ಗೆಯೂ ಮಾಹಿತಿ ಸಂಗ್ರಹಿಸಿದೆ.