ಬೆಂಗಳೂರು, ಆ.27: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ 5 ಎಕರೆ ಜಾಗ ಮಂಜೂರು ವಿವಾದಕ್ಕೆ ಸಂಬಂಧಿಸಿದಂತೆ, ‘ಕಾನೂನು ಪ್ರಕಾರವೇ ಜಾಗ ಮಂಜೂರು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಇಂದು(ಮಂಗಳವಾರ) ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಭೂಮಿ ಪಡೆಯಲು ಖರ್ಗೆ ಕುಟುಂಬದ ಶಿಕ್ಷಣ ಟ್ರಸ್ಟ್‌ಗೆ ಅರ್ಹತೆ ಇದೆ ಎಂದಿದ್ದಾರೆ.
ಖರ್ಗೆ ಕುಟುಂಬದ ಟ್ರಸ್ಟ್‌ಗೆ ಸಿಎ ಸೈಟ್ ಮಂಜೂರು; ಸ್ಪಷ್ಟನೆ ನೀಡಿದ ಸಿಎಂ
ಕಾನೂನು ಪ್ರಕಾರವೇ ಜಾಗ ಮಂಜೂರು: ‘ಅವರ ಟ್ರಸ್ಟ್‌ಗೆ ಅರ್ಹತೆ ಇದೆ, ಅದಕ್ಕೆ ಜಾಗ ಮಂಜೂರು ಮಾಡಲಾಗಿದೆ. ಆಗ ಬಿಜೆಪಿಯವರು ಚಾಣಕ್ಯ ವಿಶ್ವ ವಿದ್ಯಾಲಯಕ್ಕೆ ಹೇಗೆ ಮಾಡಿದರು?, ಇದನ್ನೂ ಕೂಡ ಕಾನೂನು ಪ್ರಕಾರವೇ ಜಾಗವನ್ನು ಮಂಜೂರು ಮಾಡಿದ್ದೇವೆ ಎಂದು ಖರ್ಗೆ ಕುಟುಂಬದ ಜಮೀನು ಮಂಜೂರಿಗೆ ಸಿಎಂ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಖರ್ಗೆ ಕುಟುಂಬಕ್ಕೆ ಕೊಟ್ಟಿದ್ದಲ್ಲ ಅದು ಟ್ರಸ್ಟ್ ಗೆ ಕೊಟ್ಟಿದ್ದು. ಒಳ್ಳೆಯ ಉದ್ದೇಶಕ್ಕೆ ಕಾನೂನು ಪ್ರಕಾರವೇ ಭೂಮಿಯನ್ನ ಕೊಡಲಾಗಿದೆ. ಬಿಜೆಪಿ ಚಾಣಾಕ್ಯ ಯುನಿವರ್ಸಿಟಿಗೆ ಕಡಿಮೆ ಬೆಲೆಗೆ ಭೂಮಿ ಕೊಟ್ಟಿಲ್ವಾ?. ಅದು ಸಂಘಪರಿವಾರದ್ದು, ಅವರಿಗೆ ಕಡಿಮೆ ಬೆಲೆಗೆ ಕೊಡಲಾಗಿದೆ. ನಾವು ಸರ್ಕಾರಕ್ಕೆ ನಷ್ಟ ಮಾಡಿ ಭೂಮಿ ಕೊಟ್ಟಿಲ್ಲ. ಖರ್ಗೆಯವರ ಕುಟುಂಬ ಒಳ್ಳೆಯ ಕೆಲಸ ಮಾಡಲೇಬಾರದಾ ಹಾಗಿದ್ದರೆ, ಒಳ್ಳೆಯ ಆಲೋಚನೆ ಉಳ್ಳ ಟ್ರಸ್ಟ್ ಅದು, ಭೂಮಿಯನ್ನ ಕಾನೂನಾತ್ಮಕ ವಾಗಿಯೇ ಕೊಟ್ಟಿದ್ದೇವೆ ಎಂದರು.