ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನ್ನ ತನಿಖೆಯನ್ನು ಆರಂಭಿಸಿದೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಮಂಗಳವಾರ ಸಂಜೆ ಶಿವಮೊಗ್ಗಕ್ಕೆ ಭೇಟಿ ನೀಡಿ, ವಿನೋಬನಗರದಲ್ಲಿರುವ ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದ ಆರು ಮಂದಿ ತಂಡ ಭೇಟಿ ನೀಡಿ, ಮೃತ ಅಧಿಕಾರಿ ಚಂದ್ರಶೇಖರನ್ ಪತ್ನಿ ಕವಿತಾರಿಂದ ಮಾಹಿತಿ ಸಂಗ್ರಹಿಸಿತು.
ಚಂದ್ರಶೇಖರನ್ ಅವರಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಸಾಕ್ಷಾಧಾರಗಳನ್ನು ಕಲೆಹಾಕಿದ ಸಿಐಡಿ ಅಧಿಕಾರಿಗಳು, ಸಾಕ್ಷಾಧಾರ ಪರಿಶೀಲನೆ ವೇಳೆ ದೊರಕಿದ ಚಂದ್ರಶೇಖರನ್ ಅವರ ಬ್ಯಾಗ್, ಬ್ಯಾಗ್ನಲ್ಲಿದ್ದ ಪೆನ್ ಡ್ರೈವ್ ಹಾಗೂ ಲ್ಯಾಪ್ಟಾಪ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದರು.
ಪೆನ್ ಡ್ರೈವ್ ಮೇಲೆ ಪದ್ಮನಾಭ್ ಎಂದು ಬರೆದಿದೆ ಎನ್ನಲಾಗಿದೆ. ಇನ್ನು ಪೆನ್ ಒಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಪದ್ಮನಾಭ ಅವರು ಪಾಲಿಕೆಯ ಎಂಡಿ ಆಗಿದ್ದು, ಡೆತ್ ನೋಟ್ನಲ್ಲಿ ಹೆಸರಿಸಲಾದ ಅಧಿಕಾರಿಗಳಲ್ಲಿ ಅವರೂ ಸೇರಿದ್ದಾರೆಂದು ತಿಳಿದುಬಂದಿದೆ.