ಬೆಂಗಳೂರು: “ಎಲ್ಲಿ ಬೆಲೆ ಏರಿಕೆ ಆಗಿದೆ? ಹಾಲಿನ ದರ ಹೆಚ್ಚಾಗಿಲ್ಲ. ಹಳೆಯ ದರವೇ ಇದೆ. ಮಾರುಕಟ್ಟೆ ಒದಗಿಸಲು 500 ಎಂಎಲ್ ಬದಲು 550 ಎಂಎಲ್, 1000 ಎಂಎಲ್ ಬದಲು 1050 ಎಂಎಲ್ ಮಾಡಿದ್ದೇವೆ. ಹೆಚ್ಚುವರಿ ಹಾಲನ್ನು ಕೊಡುತ್ತಿರುವ ಪ್ರಮಾಣಕ್ಕೆ ಮಾತ್ರವೇ ಹೆಚ್ಚು ಪಡೆಯುತ್ತಿದ್ದೇವೆ ಅಷ್ಟೇ. ಹೋಟೆಲ್ಗಳು ಕಾಫಿ, ಟೀ ದರ ಹೆಚ್ಚಿಸಲು ಸಾಧ್ಯವಿಲ್ಲ. ಹಾಲಿನ ದರ ಹೆಚ್ಚಳವಾದರೆ ಮಾತ್ರ ಕಾಫಿ, ಟೀ ದರ ಹೆಚ್ಚು ಮಾಡಬೇಕು. ಈಗ ಅವರು ಹೇಗೆ ದರ ಹೆಚ್ಚಳ ಮಾಡಲು ಸಾಧ್ಯ?” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಫಿ ಟೀ ದರ ಹೆಚ್ಚಳ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಂದಿನಿ ಹಾಲಿನ ದರ ಹೆಚ್ಚಳವಾಗಿಲ್ಲ, ಹೆಚ್ಚುವರಿಯಾಗಿ ಕೊಡುತ್ತಿರುವ ಹಾಲಿಗೆ ಪಡೆಯಬೇಕಾದ ಮೊತ್ತ ಸೇರಿಸಿದ್ದೇವೆ ಅಷ್ಟೆ. ಹೆಚ್ಚುವರಿ ಹಾಲು ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿಗೆ ಮಾರುಕಟ್ಟೆ ಒದಗಿಸಲು ಇದು ಅನಿವಾರ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
“ಹಾಲಿನ ದರ ಹೆಚ್ಚಾಗಿಲ್ಲ ಎಂದು ನಾನು ಮತ್ತೊಮ್ಮೆ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಕಳೆದ ವರ್ಷ ಈ ಸಮಯದಲ್ಲಿ 90 ಲಕ್ಷ ಲೀಟರ್ ಹಾಲು ಇತ್ತು. ಈಗ 99 ಲಕ್ಷ ಲೀಟರ್ಗಿಂತಲೂ ಹೆಚ್ಚಾಗಿದೆ. ನಾವು ರೈತರಿಂದ ಹಾಲು ಖರೀದಿ ಮಾಡಲೇಬೇಕು. ಅವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಉತ್ಪಾದನೆಯಾದ ಹಾಲಿಗೆ ಮಾರುಕಟ್ಟೆ ಒದಗಿಸಲೇಬೇಕು. ಹಾಗಾಗಿ ಅರ್ಧ ಲೀಟರ್ಗೆ 50 ಎಂಎಲ್ ಜಾಸ್ತಿ ಮಾಡಿದ್ದೇವೆ. ಕ್ವಾಂಟಿಟಿ ಹೆಚ್ಚು ಮಾಡಿದ್ದೇವೆ. ಆ ಹೆಚ್ಚುವರಿ ಕ್ವಾಂಟಿಟಿಗೆ ಬೇಕಾದ ಬೆಲೆಯನ್ನು ನಿಗದಿ ಮಾಡಿದ್ದೇವೆ. 50 ಮಿಲಿ ಲೀಟರ್ಗೆ ಬೇಕಾದ ಹಣವನ್ನು ಹೆಚ್ಚು ಮಾಡಿದ್ದೇವೆ. 50 ಎಂಎಲ್ಗೆ 2.10 ರೂ. ಆಗಲಿದೆ. ಅದನ್ನು ಎರಡು ರೂ. ನಿಗದಿ ಮಾಡಿದ್ದೇವೆ” ಎಂದು ದರ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು.
ಗ್ರಾಹಕರು ಒತ್ತಾಯಪೂರ್ವಕಾಗಿ ಹೆಚ್ಚುವರಿ ಹಾಲು ಖರೀದಿಸುವ ಅನಿವಾರ್ಯತೆ ಸೃಷ್ಟಿಸಿದಂತಲ್ಲವೇ ಎನ್ನುವ ಪ್ರಶ್ನೆಗೆ ಗರಂ ಆದ ಸಿಎಂ, “ಹೆಚ್ಚುವರಿ ಉತ್ಪಾದನೆಯಾಗುತ್ತಿರುವ ಹಾಲನ್ನು ಚೆಲ್ಲಬೇಕಾ ನಾನು, ಹಾಲನ್ನು ಚೆಲ್ಲಲು ಸಾಧ್ಯವಾಗುತ್ತಾ? ರೈತರಿಂದ ನಾವು ಖರೀದಿ ಮಾಡಲ್ಲ ಎನ್ನಬೇಕಾ? ಇದೆಲ್ಲಾ ಸಾಧ್ಯವಿಲ್ಲ. ಹಾಗಾಗಿ ಜನ ಹೆಚ್ಚುವರಿ ಹಾಲು ಖರೀದಿ ಮಾಡಲೇಬೇಕು. ಜಾಸ್ತಿ ಹಾಲು ಕೊಡುತ್ತಿದ್ದೇವೆ, ಜಾಸ್ತಿ ಹಣ ಪಡೆಯುತ್ತಿದ್ದೇವೆ. ಇಲ್ಲಿ ದರ ಏರಿಕೆ ಹೇಗೆ ಬರಲಿದೆ?” ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಹೆಸರು ಪ್ರಸ್ತಾವನೆ ಮಾಡಿದ್ದೆ: ರಾಹುಲ್ ಗಾಂಧಿ ಅವರು ಪ್ರತಿಪಕ್ಷದ ನಾಯಕನಾಗಬೇಕು ಎನ್ನುವ ಪ್ರಸ್ತಾವನೆಯನ್ನು ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾನೇ ಮಂಡಿಸಿದ್ದೆ. ಬಿಜೆಪಿ ಸರ್ಕಾರವನ್ನು, ನರೇಂದ್ರ ಮೋದಿಯನ್ನು ಎದುರಿಸಬೇಕು ಎಂದರೆ ನೀವೇ ಪ್ರತಿ ಪಕ್ಷದ ನಾಯಕ ಆಗಬೇಕು ಎಂದು ಕಾರ್ಯಕಾರಿ ಸಮಿತಿಯಲ್ಲಿ ನಾನು ಒತ್ತಾಯ ಮಾಡಿದ್ದೆ. ಕಾರ್ಯಕಾರಿ ಸಮಿತಿಯೂ ಒತ್ತಾಯ ಮಾಡಿತ್ತು. ರಾಹುಲ್ ಗಾಂಧಿಯವರು ಈ ಜವಾಬ್ದಾರಿ ತೆಗೆದುಕೊಂಡಿದ್ದು ದೇಶದ ಹಿತದೃಷ್ಟಿಯಿಂದ ಬಹಳ ಒಳ್ಳೆಯದು. ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.