ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ: ಮುಖ್ಯಮಂತ್ರಿ ಸಿದ್ದರಾಮಯ್ಯ

Ravi Talawar
ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ: ಮುಖ್ಯಮಂತ್ರಿ ಸಿದ್ದರಾಮಯ್ಯ
WhatsApp Group Join Now
Telegram Group Join Now
ಬಳ್ಳಾರಿ,ಮೇ 16: ರಾಜ್ಯ ಸರ್ಕಾರವು 2 ವ಼ರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕಾರ್ಯಕ್ರಮ ಆಯೋಜನೆ ಕುರಿತಂತೆ, ಶುಕ್ರವಾರ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
2023 ರ ಮೇ 20 ರಂದು ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದು ಈಗ ಎರಡು ವರ್ಷ ಪೂರೈಸುತ್ತಿದೆ. ಅಂದೇ ಕ್ಯಾಬಿನೆಟ್ ಸಭೆಯಲ್ಲಿ ಪಂಚ ಗ್ಯಾರಂಟಿ ಜಾರಿಗೆ ಕುರಿತಂತೆ ಚರ್ಚಿಸಲಾಗಿತ್ತು. ಪ್ರಥಮವಾಗಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷಿö್ಮ ಮತ್ತು ಯುವನಿಧಿ ಸೇರಿದಂತೆ ಹಂತ-ಹAತವಾಗಿ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಗೆಲ್ಲಿಸಿದಂತಹ ಪ್ರಜಾಪ್ರಭುತ್ವದ ಮತದಾರರಿಗೆ ನಮ್ಮ ಸರ್ಕಾರವು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ಹಲವರು ಟೀಕಿಸುತ್ತಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 51 ಸಾವಿರ ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗಿದೆ. ಕಳೆದ ವಷÀð ಗ್ಯಾರಂಟಿ ಯೋಜನೆಗಳಿಗಾಗಿಯೇ 52.9 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈ ವಷÀð 50.18 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ, ಅಗತ್ಯಬಿದ್ದಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು.
2024-25 ನೇ ಸಾಲಿನಲ್ಲಿ 3,71,000 ಕೋಟಿ ರೂ. ಬಜೆಟ್ ಗಾತ್ರವಿತ್ತು. 2025-26 ನೇ ಸಾಲಿನಲ್ಲಿ ಬಜೆಟ್ ನ ಗಾತ್ರವನ್ನು 4,09,000 ಕೋಟಿ ರೂ. ಗೆ ಹೆಚ್ಚಿಸಲಾಗಿದೆ. ಅಂದರೆ ಸುಮಾರು 38,000 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, ನುಡಿದಂತೆ ನಡೆದ ಸರ್ಕಾರ ನಮ್ಮದು ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
*ಕೆಕೆಆರ್‌ಡಿಬಿ ಗೆ 5 ಸಾವಿರ ಕೋಟಿ ರೂ.:*
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ರಾಜ್ಯ ಸರ್ಕಾರವು 5 ಸಾವಿರ ಕೋಟಿ ರೂ. ನೀಡಿದೆ. ಈ ಭಾಗದ 371 (ಜೆ) ವಿಶೇಷ ಸ್ಥಾನಮಾನವನ್ನು ನಮ್ಮ ಸರ್ಕಾರವೇ ಜಾರಿಗೊಳಿಸಿದ್ದು ಎಂದು ಮನನ ಮಾಡಿದ ಅವರು, ಕೇಂದ್ರ ಸರ್ಕಾರವು ತಿದ್ದುಪಡಿ ಬಳಿಕ ವಿಶೇಷ ಸ್ಥಾನಮಾನ ನೀಡಲು ಪ್ರತಿಬಿಂಬಿಸಿತ್ತು, ಆದರೆ ಈವರೆಗೆ ಒಂದು ರೂ. ಕೂಡ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಸರ್ಕಾರವು ವಸತಿ ಯೋಜನೆಯಡಿ ಒಂದೇ ಒಂದು ಮನೆ ನೀಡಲಾಗಲಿಲ್ಲ, ಈ ಬಾರಿ ವಸತಿ ಯೋಜನೆಯಡಿ ಮನೆ ವಿತರಿಸುವ ಕುರಿತಂತೆ ವಸತಿ ಸಚಿವರು ಪ್ರಸ್ತಾಪಿಸಿದ್ದಾರೆ ಎಂದರು.
*1.03 ಲಕ್ಷ ಹಕ್ಕುಪತ್ರ ವಿತರಣೆ:*
ನಮ್ಮ ಸರ್ಕಾರವು ಎರಡು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದ್ದು, ಇನ್ನುಮುಂದೆಯೂ ನಡೆಯುತ್ತೇವೆ ಎಂದು ಜನರಿಗೆ ತಿಳಿಯಪಡಿಸಲು ಮೇ 20 ರಂದು ನಡೆಯುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮದಲ್ಲಿ ಹಾಡಿ, ಹಟ್ಟಿ ಮತ್ತು ತಾಂಡಾ ಪ್ರದೇಶದ ಕನಿಷ್ಠ 1.03 ಲಕ್ಷ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಇದರಿಂದ ಜನರಿಗೆ ಸೌಲಭ್ಯ  ಸಮರ್ಪಿಸುವ ಸಮರ್ಪಣಾ ಸಂಕಲ್ಪ ಸಮಾವೇಶ ಕಾರ್ಯಕ್ರಮ ಇದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಕಾರ್ಯಕ್ರಮಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು, ಶಾಸಕರುಗಳನ್ನು ಸಹ ಆಹ್ವಾನಿಸಲಾಗಿದೆ.  ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲಾಗುವುದು. ಕನಿಷ್ಠ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರುವ ನಿರೀಕ್ಷೆ ಹೊಂದಲಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಝೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಹೆಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಣ್ಣನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಸಂಸದ ಈ.ತುಕಾರಾಮ್, ಶಾಸಕರಾದ ಹೆಚ್.ಆರ್.ಗವಿಯಪ್ಪ, ಬಿ.ನಾಗೇಂದ್ರ, ಜೆ.ಎನ್.ಗಣೇಶ್, ಎಂ.ಪಿ.ಲತಾ, ಶ್ರೀನಿವಾಸ ನಾಯ್ಕ ಮತ್ತು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ, ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಮೊಹಮದ್ ನೊಂಗ್ಜಾಯ್ ಅಕ್ರಂ ಅಲಿ ಪಾಷಾ, ಎಸ್ಪಿಗಳಾದ ಡಾ.ಶೋಭರಾಣಿ.ವಿ.ಜೆ., ಶ್ರೀಹರಿಬಾಬು ಸೇರಿದಂತೆ ಅನೇಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article