ಎಸ್​ಟಿ ವಸತಿ ಶಾಲೆ, ರಾಯಚೂರು ವಿವಿಗೆ ವಾಲ್ಮೀಕಿ ಹೆಸರು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

Ravi Talawar
ಎಸ್​ಟಿ ವಸತಿ ಶಾಲೆ, ರಾಯಚೂರು ವಿವಿಗೆ ವಾಲ್ಮೀಕಿ ಹೆಸರು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಎಲ್ಲಾ ಎಸ್​​ಟಿ ವಸತಿ ಶಾಲೆಗಳಿಗೆ ಮತ್ತು ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಐದು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

”ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯದವರು. ದರೋಡೆ ಮಾಡ್ಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಕಟ್ಟಿಬಿಟ್ಟರು. ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥ ಹೊತ್ತಲ್ಲೇ ಸಂಸ್ಕೃತ ಕಲಿತು ಶ್ಲೋಕಗಳ ಮೂಲಕ ಜಗತ್ಪ್ರಸಿದ್ದ ರಾಮಾಯಣ ಮಹಾಕಾವ್ಯ ಬರೆದರಲ್ಲಾ, ಇದು ಹೆಮ್ಮೆಯ ಮತ್ತು ಮಾದರಿ ಸಂಗತಿ” ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.

ವಾಲ್ಮೀಕಿ ವಿಶ್ವಮಾನವರಾಗಿದ್ದರು: ”ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು, ಬರೆದರು. ಈ ಮೂಲಕ ಜಗತ್ತಿಗೇ ಪ್ರೇರಣೆ ಆದರು. ವಾಲ್ಮೀಕಿ ಅವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ. ರಾಮನ‌ ಮಕ್ಕಳಾದ ಲವ, ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿ. ವಾಲ್ಮೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ” ಎಂದು ಸಿಎಂ ಹೇಳಿದರು.

”ಎಸ್​ಸಿಎಸ್​ಪಿ/ಟಿಎಸ್​ಪಿ ಮೂಲಕ ಎಸ್​ಸಿ/ಎಸ್​ಟಿ ಮೂಲಕ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಆಯವ್ಯಯದಲ್ಲಿ ಮೊದಲಿಗೆ ಮೀಸಲಿಟ್ಟಿದ್ದು ನಮ್ಮ ಕಾಂಗ್ರೆಸ್​ ಸರ್ಕಾರ. ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತಿ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡುತ್ತೇನೆ” ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪುನರುಚ್ಚರಿಸಿದರು.

”ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಾಗಲಿ ಎಸ್​ಸಿಎಸ್​ಪಿ/ಟಿಎಸ್​ಪಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ ಏಕೆ?” ಎಂದು ಪ್ರಶ್ನಿಸಿದ ಸಿಎಂ, ”ಬರೀ ಬಾಯಿ ಮಾತಲ್ಲಿ ಸಮಾನತೆ ಬರಲ್ಲ. ಆರ್ಥಿಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು” ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ಟೀಕಿಸಿದರು.

WhatsApp Group Join Now
Telegram Group Join Now
Share This Article