ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಶೇ 80 ರಷ್ಟು ನಾಗರೀಕರು ಬಡತನ ರೇಖೆಗಿಂತ ಕೆಳಗಿರುವುದು ಹೇಗೆ? ಇದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಅಧಿಕಾರಿಗಳ ಜತೆ ಸಭೆ ನಡೆಸಿದಾಗ ಕೇಳಿದ ಪ್ರಶ್ನೆ. ರಾಜ್ಯದಲ್ಲಿ ಹೆಚ್ಚಾಗಿರುವ ಬೋಗಸ್ ಬಿಪಿಎಲ್ ಕಾರ್ಡ್ಗಳ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಬಳಿ ಈ ರೀತಿ ಪ್ರಶ್ನೆ ಕೇಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಬೋಗಸ್ ಬಿಪಿಎಲ್ ಕಾರ್ಡ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪ್ರಮಾಣ ಶೇಕಡಾ 40 ರಷ್ಟಿದೆ ಎಂದು ಉಲ್ಲೇಖಿಸಿದ ಸಿದ್ದರಾಮಯ್ಯ, ನೀತಿ ಆಯೋಗದ ಪ್ರಕಾರ ಕರ್ನಾಟಕದಲ್ಲಿ ಕೇವಲ ಶೇಕಡಾ 5.67 ರಷ್ಟು ನಾಗರಿಕರು ಬಿಪಿಎಲ್ ಆಗಿರಬೇಕು ಎಂದಿದ್ದಾರೆ. ಆದಾಗ್ಯೂ, 4.67 ಕೋಟಿ ಜನರನ್ನು ಹೊಂದಿರುವ 1.47 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ನಿಜವಾದ ಬಡವರಿಗೆ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ನೀಡುವುದರ ಜತೆಗೆ ಎಲ್ಲಾ ಬೋಗಸ್ ಕಾರ್ಡ್‌ಗಳನ್ನು ತೊಡೆದುಹಾಕಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಖಡಕ್ ಸಂದೇಶ ರವಾನಿಸಿದ್ದಾರೆ.