ಚೆಸ್ ಒಂದು ಮೈಂಡ್ ಗೇಮ್ – ಪೋಲಾ ಪ್ರವೀಣ್ ಅವರ ದಿಟ್ಟ ದೃಷ್ಟಿಕೋನ

MK HasiruKranti
ಚೆಸ್ ಒಂದು ಮೈಂಡ್ ಗೇಮ್ – ಪೋಲಾ ಪ್ರವೀಣ್ ಅವರ ದಿಟ್ಟ ದೃಷ್ಟಿಕೋನ
WhatsApp Group Join Now
Telegram Group Join Now
ಬಳ್ಳಾರಿ, ಏ. 03 : “ಚದುರಂಗವು ಕೇವಲ ಆಟವಲ್ಲ, ಅದು ಮನಸ್ಸನ್ನು ತರಬೇತುಗೊಳಿಸುವ ಮಹತ್ವದ ಸಾಧನ” ಎಂದು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಪೋಲಾ ಪ್ರವೀಣ್ ಅಭಿಪ್ರಾಯಪಟ್ಟರು. ನಗರದ ಪೋಲಾ ಹೋಟೆಲ್‌ನ ಡೈಮಂಡ್ ಸಭಾಂಗಣದಲ್ಲಿ ನಡೆದ ಭವ್ಯ ಚೆಸ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಖಂಡ ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್, ಬಳ್ಳಾರಿ ಜಿಲ್ಲಾ ಕನಕದುರ್ಗ ಚೆಸ್ ಅಕಾಡೆಮಿ ಹಾಗೂ ಬಳ್ಳಾರಿ ಡಿಸ್ಟ್ರಿಕ್ ಚೆಸ್ ಅಸೋಸಿಯೇಷನ್‌ಗಳ ಸಂಯುಕ್ತ ಆಶ್ರಯದಲ್ಲಿ 11, 13, 15 ಮತ್ತು 17 ವರ್ಷ ವಯೋಮಿತಿಯೊಳಗಿನ ಮಕ್ಕಳಿಗಾಗಿ ಆಯೋಜಿಸಲಾದ ಈ ಸ್ಪರ್ಧೆಯನ್ನು ಪೋಲಾ ಪ್ರವೀಣ್ ಅವರು ಕಾಯಿಯನ್ನು ಸರಿಸುವ ಮೂಲಕ ಉದ್ಘಾಟಿಸಿದರು.
ತಮ್ಮ ಭಾಷಣದಲ್ಲಿ ಅವರು ಚೆಸ್ ಆಟದ ಮಹತ್ವವನ್ನು ವಿಶೇಷವಾಗಿ ಒತ್ತಿಹೇಳುತ್ತಾ, “ಚದುರಂಗವು ಮಕ್ಕಳಲ್ಲಿ ಏಕಾಗ್ರತೆ, ತಾಳ್ಮೆ, ತ್ವರಿತ ನಿರ್ಧಾರ ಸಾಮರ್ಥ್ಯ ಹಾಗೂ ತಾರ್ಕಿಕ ಚಿಂತನೆಗಳನ್ನು ಬೆಳೆಸುತ್ತದೆ. ಇವುಗಳು ಅವರ ವಿದ್ಯಾಭ್ಯಾಸದಲ್ಲಿಯೂ ದೊಡ್ಡ ಮಟ್ಟದಲ್ಲಿ ಸಹಾಯಕವಾಗುತ್ತವೆ” ಎಂದರು.
ಇದೇ ಸಂದರ್ಭದಲ್ಲಿ, ಬಳ್ಳಾರಿ ಜಿಲ್ಲೆಯ ಚೆಸ್ ಪ್ರತಿಭೆಗಳ ಬೆಳೆವಣಿಗೆಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ ಪೋಲಾ ಪ್ರವೀಣ್, “ಜಿಲ್ಲೆಯ ಚೆಸ್ ಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಬಳ್ಳಾರಿಯ ಕೀರ್ತಿಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಯಾವುದೇ ಸಂದರ್ಭದಲ್ಲೂ ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲು ನಾನು ತನು-ಮನ-ಧನದೊಂದಿಗೆ ಸಹಕಾರ ನೀಡಲು ಸಿದ್ಧನಿದ್ದೇನೆ” ಎಂದು ಭರವಸೆ ನೀಡಿದರು.
ಅವರ ಈ ದಿಟ್ಟ ನಿಲುವು ಹಾಗೂ ಕ್ರೀಡಾಭಿಮಾನವು ಯುವ ಪ್ರತಿಭೆಗಳಲ್ಲಿಯೂ ಹೊಸ ಉತ್ಸಾಹ ಮೂಡಿಸಿದ್ದು, ಸಮಾರಂಭಕ್ಕೆ ಹೊಸ ಮೆರುಗು ನೀಡಿತು. ಪೋಲಾ ಪ್ರವೀಣ್ ಅವರ ಪ್ರೋತ್ಸಾಹದಿಂದ ಬಳ್ಳಾರಿ ಜಿಲ್ಲೆಯಲ್ಲಿ ಚೆಸ್ ಕ್ರೀಡೆಗೆ ಹೊಸ ಚೈತನ್ಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಈ ಸ್ಪರ್ಧೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ಟ್ರೋಫಿ ನೀಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ.ಹೆಚ್.ಎಂ ವಿರೂಪಾಕ್ಷಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿ.ವಿ.ಎಸ್.ಎಸ್ ಟ್ರಸ್ಟ್ ಅಧ್ಯಕ್ಷ ಕೆ.ವಿ. ಶೆಟ್ಟಿ, ಎಂ.ಎಸ್.ಜಿ ಕನ್ಸ್ಟ್ರಕ್ಷನ್ ಮಾಲಿಕ ಎಂ. ಸಿದ್ದರಾಮನಗೌಡ, ಗೌರಮ್ಮ ಜಂಬಯ್ಯ ಸ್ವಾಮಿ ಚಾರಿಟೇಬಲ್ ಮತ್ತು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸರ್ವಯ ಸ್ವಾಮಿ, ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಜೆ.ಸಿ. ರೆಡ್ಡಿ, ಟೈಗರ್ ಹಿಲ್ಸ್ ಶಾಲೆಯ ಅಧ್ಯಕ್ಷ ರಂಗಸ್ವಾಮಿ ಹಾಗೂ ಅಂತರಾಷ್ಟ್ರೀಯ ಅರ್ಭಿಟರ್ ಬಸವರಾಜ್ ಎಂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಒಟ್ಟಾರೆ, ಈ ಚೆಸ್ ಪಂದ್ಯಾವಳಿ ಕೇವಲ ಸ್ಪರ್ಧೆಯಾಗಿ ಉಳಿಯದೆ, ಮಕ್ಕಳ ಮನೋವಿಕಾಸಕ್ಕೆ ಬುನಾದಿ ಹಾಕುವ ಮಹತ್ವದ ವೇದಿಕೆಯಾಗಿ ಪರಿಣಮಿಸಿದ್ದು, ಇದಕ್ಕೆ ಪೋಲಾ ಪ್ರವೀಣ್ ಅವರಂತಹ ಕ್ರೀಡಾಭಿಮಾನಿಗಳ ಬೆಂಬಲವೇ ಪ್ರಮುಖ ಶಕ್ತಿ ಎನ್ನಬಹುದು.
WhatsApp Group Join Now
Telegram Group Join Now
Share This Article