ಬೆಂಗಳೂರು, (ನವೆಂಬರ್ 21): ತೀವ್ರ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದೆಡೆ ನಾಯಕರು, ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಬೊಂಬೆನಗರಿಯ ಉಪಚುನಾವಣೆಗೆ ಶೇ.88.81ರಷ್ಟು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಗೊಂಡಿರುವುದು, ಹೆಚ್ಚಿನ ಮುಸ್ಲಿಂ ಮತಗಳು, ಮಹಿಳಾ ಮತದಾರರೇ ಫಲಿತಾಂಶ ನಿರ್ಧರಿಸುವ ಅಂಶಗಳಾಗಿ ಪರಿಗಣಿತವಾಗುತ್ತಿದ್ದು, ಅವುಗಳ ಆಧಾರದ ಮೇಲೆಯೇ ಸೋಲು, ಗೆಲುವಿನ ಸಾಧ್ಯತೆಗಳು ಚರ್ಚೆಯಲ್ಲಿವೆ.
ಈಗಾಗಲೇ ಹೋಟೆಲ್‍ಗಳು, ಟೀ ಅಂಗಡಿಗಳು, ಸಾರ್ವಜನಿಕ ಸ್ಥಳಗಳು ಚರ್ಚಾ ತಾಣಗಳಾಗಿವೆ. ಇದರ ನಡುವೆ ಬೆಂಗಳೂರಿನ ಎನ್‌ಎಂಐಟಿಯ ಸೆಂಟರ್ ಫಾರ್ ಪಾಲಿಸಿ ಆ್ಯಂಡ್ ಗವರ್ನನ್ಸ್ ಸ್ಟಡೀಸ್ ಮತ್ತು ಲೋಕನೀತಿ ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ವಿಧಾನಸಭೆ ಕ್ಷೇತ್ರದ 20 ಮತಗಟ್ಟೆಗಳಲ್ಲಿ ತಲಾ 25 ಮತದಾರರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರೊಂದಿಗೆ ಒಟ್ಟು 502 ಜನರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲಾಗಿದೆ. ಮುಖಾಮುಖಿ ಸಂದರ್ಶನದ ಮೂಲಕ ಚುನಾವಣೋತ್ತರ ಟ್ರೆಂಡ್ ಬಗ್ಗೆ ವರದಿ ತಯಾರಿಸಲಾಗಿದೆ.