ಕನ್ನಡ ನಾಡು–ನುಡಿಯ ಹಬ್ಬಕ್ಕೆ ಸಾಕ್ಷಿಯಾಗುವ ಚನ್ನಮ್ಮನ ಕಿತ್ತೂರು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇಂದು

Hasiru Kranti
ಕನ್ನಡ ನಾಡು–ನುಡಿಯ ಹಬ್ಬಕ್ಕೆ ಸಾಕ್ಷಿಯಾಗುವ ಚನ್ನಮ್ಮನ ಕಿತ್ತೂರು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇಂದು
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಬೈಲಹೊಂಗಲ ರಸ್ತೆಗೆ ಹೊಂದಿಕೊಂಡು ಇರುವ ಅನುಭವ ಮಂಟಪ ಮಂಗಲ ಕಾರ್ಯಾಲಯದಲ್ಲಿ ಇಂದು ಕನ್ನಡ ನಾಡು–ನುಡಿಯ ಉತ್ಸವದ ಕೇಂದ್ರವಾಗಲಿದೆ. ಕನ್ನಡ ಭಾಷೆಯ ಬೇರು, ಸಾಹಿತ್ಯದ ಘನತೆ, ಕೃಷಿಯ ಸುಸ್ಥಿರತೆ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಸ್ಮರಿಸಿ ಮುಂದಿನ ಪೀಳಿಗೆಗೆ ಹಂಚುವ ಮಹತ್ವಾಕಾಂಕ್ಷೆಯೊಂದಿಗೆ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿ ವಿಜೃಂಭಣೆಯಿಂದ ಜರುಗಲಿದೆ. ನಾಡು–ನುಡಿಯ ಮೇಲಿನ ಅಭಿಮಾನ, ಸಾಹಿತ್ಯದ ಸೃಜನಶೀಲತೆ, ಕೃಷಿಯ ಮಹತ್ವ ಮತ್ತು ಸಾಂಸ್ಕೃತಿಕ ಚೇತನವನ್ನು ಒಟ್ಟುಗೂಡಿಸುವ ಈ ಸಮ್ಮೇಳನ ಕಿತ್ತೂರು ನೆಲಕ್ಕೆ ಹೊಸ ಸಾಹಿತ್ಯ ಕಳೆ ನೀಡಲಿದೆ.

ಮುಂಜಾನೆ 8-00 ಗಂಟೆಗೆ ಮುಖ್ಯ ವೇದಿಕೆಯ ಮುಂಭಾಗದಲ್ಲಿ ನಿರ್ಮಿಸಿದ ಶರಣೆ ಗಂಗಾಬಿಕಾ ಮಹಾದ್ವಾರದ ಬಳಿ ರಾಷ್ಟ್ರಧ್ವಜಾರೋಹಣವನ್ನು ತಹಶಿಲ್ದಾರ ಕಲಗೌಡ ಪಾಟೀಲ ಅವರು ನೆರವೇರಿಸಲಿದ್ದು, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ಹಾಗೂ ನಾಡ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ಅವರು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ತಾಲೂಕಿನ ಎಲ್ಲ ಪಿಕೆಪಿಎಸ್ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಧರ್ಮಸ್ಥಳ ಮಂಜುನಾಥೇಶ್ವರ ಸ್ವಸಹಾಯ ಸಂಘದ ಸದಸ್ಯರು, ಶಿಕ್ಷಕ ಬಳಗ, ನಿವೃತ್ತ ಸೇನಾಧಿಕಾರಿಗಳು, ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.

ಮುಂಜಾನೆ 9-00 ಗಂಟೆಗೆ ಪಟ್ಟಣದ ಕಲ್ಮೇಶ್ವರ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಯ ಡಾ. ಜಗದೀಶ ಹಾರುಗೊಪ್ಪ ಅವರ ಮನೆಯವರೆಗೆ ಶ್ರೀ ಭುವನೇಶ್ವರಿ ದೇವಿಯ ಕೃಪೆಯೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷರಾದ ಕಾದರವಳ್ಳಿ ಸೀಮಿಮಠದ ಶ್ರೀ ಡಾ. ಪಾಲಾಕ್ಷ ಶಿವಯೋಗಿಗಳ ಭವ್ಯ ಮೆರವಣಿಗೆ ಜರುಗಲಿದೆ. ಮೆರವಣಿಗೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷ ಪ್ರಕಾಶ ಕೊಡ್ಲಿ ಅವರು ಚಾಲನೆ ನೀಡಲಿದ್ದು, ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿ, ಮಹಾಂತೇಶ ಗಣಾಚಾರಿ, ಕಲ್ಮೇಶ ಪಾಶ್ಚಾಪೂರ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಮೆರವಣಿಗೆ ಕನ್ನಡಾಭಿಮಾನ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕವಾಗಲಿದೆ.

ಮುಂಜಾನೆ 11-30 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾದರವಳ್ಳಿ ಸೀಮಿಮಠದ ಶ್ರೀ ಡಾ. ಪಾಲಾಕ್ಷ ಶಿವಯೋಗಿಗಳು ಸಮ್ಮೇಳನದ ಸರ್ವಾಧ್ಯಕ್ಷ ಸ್ದಥಾನವನ್ನು ವಹಿಸಲಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ನಿಕಟಪೂರ್ವ ಸರ್ವಾಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ಎಂ.ಎಂ. ಸಂಗಣ್ಣವರ ಅವರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಜಿಲ್ಲಾ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಿತ್ತೂರು ಪಟ್ಟಣ ಪಂಚಾಯತ್ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಸ್ಮರಣ ಸಂಚಿಕೆ ಹಾಗೂ ಹೊಸ ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಮಧ್ಯಾಹ್ನ 1-00 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದ ಇತಿಹಾಸ, ಜಾನಪದ ಪರಂಪರೆ ಹಾಗೂ ಕೃಷಿ ಸಂಸ್ಕೃತಿಯ ನಡುವಿನ ಜೀವಂತ ಸಂಬಂಧದ ಕುರಿತು ಚಿಂತನೆ ನಡೆಯಲಿದೆ. ನಿವೃತ್ತ ಪ್ರಾಚಾರ್ಯ ಗಂಗಾಧರ ಕೋಟಗಿ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಅವರು ವಿಷಯ ನಿರೂಪಿಸಲಿದ್ದು, ಖ್ಯಾತ ಕೃಷಿ ತಜ್ಞ ಡಾ. ಬಿ.ಎಂ. ನಾಗಭೂಷಣ ಅವರು ಕೃಷಿ ಕುರಿತ ಸಂವಾದದ ಮೂಲಕ ಸಾಹಿತ್ಯ–ಜೀವನದ ನಂಟನ್ನು ವಿವರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಪ್ರತಿನಿಧಿ ಡಾ. ಜಗದೀಶ ಹಾರುಗೊಪ್ಪ ಹಾಗೂ ಜಿ.ಎಸ್. ಹಲಸಗಿ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಮಧ್ಯಾಹ್ನ 3-00 ಗಂಟೆಗೆ ಕವಿ ಗೋಷ್ಠಿ ನಡೆಯಲಿದ್ದು, ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಕವಿಗಳು ತಮ್ಮ ಕಾವ್ಯ ವಾಚನದ ಮೂಲಕ ಕನ್ನಡ ಸಾಹಿತ್ಯದ ಸೌಂದರ್ಯವನ್ನು ಅನಾವರಣಗೊಳಿಸಲಿದ್ದಾರೆ. ಇದು ಯುವ ಪ್ರತಿಭೆಗಳಿಗೆ ವೇದಿಕೆಯಾಗುವ ಮಹತ್ವದ ಕ್ಷಣವಾಗಲಿದೆ. ಈ ಗೋಷ್ಠಿಗೆ ಮುಖ್ಯಾಧ್ಯಾಪಕ ಷಣ್ಮುಖ ಗಣಾಚಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಪಾಟೀಲ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನ್ನವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿಕ್ಷಕ ಮೆಹಬೂಬ ಮುಲ್ತಾನಿ ಅವರು ಆಶಯ ನುಡಿಗಳನ್ನಾಡಲಿದ್ದು, ಕಸಾಪ ಕಿತ್ತೂರು ತಾಲೂಕಾ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಸಂಜೆ 4-00 ಗಂಟೆಗೆ ನಡೆಯುವ ಸಮಾರೋಪ ಹಾಗೂ ಸನ್ಮಾನ ಸಮಾರಂಭದಲ್ಲಿ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಶಂಕರಯ್ಯ ಶಾಸ್ತ್ರಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸರ್ವಾಧ್ಯಕ್ಷರಾದ ಶ್ರೀ ಡಾ. ಪಾಲಾಕ್ಷ ಶಿವಯೋಗಿಗಳು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದು, ಜಿಲ್ಲಾ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಪಕ್ಕಿರಪೂರ, ಸಾಹಿತಿಗಳಾದ ಹೇನಾ ಸೋನಳ್ಳಿ, ಪ್ರಕಾಶಗೌಡ ಪಾಟೀಲ, ಮಲ್ಲಯ್ಯ ಹಿರೇಮಠ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಈ ಸಮಾರೋಪ ಸಮಾರಂಭದೊಂದಿಗೆ ಸಮ್ಮೇಳನವು ಕನ್ನಡ ಸಾಹಿತ್ಯದ ಅಕ್ಷರಯಾತ್ರೆಯನ್ನು ಮತ್ತೊಮ್ಮೆ ಜೀವಂತಗೊಳಿಸುವ ಸಂಕಲ್ಪವನ್ನು ಹೊತ್ತು ಮುಕ್ತಾಯಗೊಳ್ಳಲಿದೆ. ಪಂಪ–ರನ್ನ–ಕುಮಾರವ್ಯಾಸರ ಸಾಹಿತ್ಯ ಪರಂಪರೆಯಿಂದ ಹಿಡಿದು ಸಮಕಾಲೀನ ಬರಹಗಾರರ ಸೃಜನಶೀಲತೆವರೆಗೆ ಹರಡುವ ಕನ್ನಡ ಸಾಹಿತ್ಯದ ಧಾರೆ, ನಾಡಿನ ನೆಲ–ಜಲ–ಜನಜೀವನದ ಜೊತೆಗಿನ ಸಂಬಂಧವನ್ನು ಈ ಸಮ್ಮೇಳನ ಪುನರುಚ್ಚರಿಸಲಿದೆ. ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ಜನರ ಚಿಂತನೆ, ಸಂಸ್ಕೃತಿ ಮತ್ತು ಸ್ವಾಭಿಮಾನವೆಂಬ ಅರಿವನ್ನು ಬಿತ್ತುವ ಮೂಲಕ ಯುವಪೀಳಿಗೆಗೆ ಓದು–ಬರಹದ ಆಸಕ್ತಿ ಮೂಡಿಸುವ ಸಾಹಿತ್ಯ ಸಂಭ್ರಮವಾಗಿ ಈ ಸಮ್ಮೇಳನ ನೆನಪಾಗಲಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ…

 

12ನೇ ಶತಮಾನದಿಂದ ವಚನ ಸಾಹಿತ್ಯದ ದೀಪವನ್ನು ಹೊತ್ತಿಸಿ, ಕಾದಿದ–ಹಳ್ಳಿ ಕಾದ್ರೊಳ್ಳಿಯ ಸೀಮಿಮಠದ ಅಪ್ಪಶಿವಯೋಗಿಗಳು ಅದನ್ನು ಭಜನೆಗಳ ನಾದದಲ್ಲಿ ಜನಮನಕ್ಕೆ ಇಳಿಸಿದರು. ಆ ಪರಂಪರೆಯ ಮುಂದುವರಿಕೆಯಾಗಿ ಇಂದಿನ ದಿನಗಳಲ್ಲಿ ಶ್ರೀ ಡಾ. ಪಾಲಾಕ್ಷ ಶಿವಯೋಗಿಗಳು ಜನಪದ ಸಾಹಿತ್ಯದಲ್ಲಿ ಶರಣರು ಎಂಬ ಅರ್ಥಪೂರ್ಣ ಪ್ರಬಂಧವನ್ನು ರಚಿಸಿ, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಲ್ಗೊಂಡು ನಾಡಿಗೆ ಅಭಿನವ ಶೋಭೆ ತಂದಿದ್ದಾರೆ.

-ಡಾ ಜಗದೀಶ ಹಾರುಗೊಪ್ಪ. ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಪ್ರತಿನಿಧಿ ಬೆಳಗಾವಿ.

 

WhatsApp Group Join Now
Telegram Group Join Now
Share This Article