ನಿರ್ದೇಶಕ ಆರ್. ಚಂದ್ರು ಅವರ ಮೇಲಿನ ಪ್ರೀತಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಆರ್.ಸಿ ಸ್ಟುಡಿಯೋಸ್ ಗೆ ಚಾಲನೆ ಕೊಟ್ಟು, ‘ಫಾದರ್’ ಚಿತ್ರ ಅನಾವರಣ ಮಾಡಿಕೊಟ್ಟದ್ದು ಎಲ್ಲರಿಗೂ ಗೊತ್ತೇ ಇದೆ.
ಆರ್ ಸಿ ಸ್ಟುಡಿಯೋಸ್ ನ ‘ಫಾದರ್’ ಚಿತ್ರ ಎಲ್ಲಾ ಕೆಲಸಗಳನ್ನು ಪೂರೈಸಿ ಬಿಡುಗಡೆಗೆ ಸಿದ್ಧವಾಗಿದೆ. ಅದರ ಭಾಗವಾಗಿ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಅದ್ಧೂರಿಯಾಗಿ ರಿಲೀಸ್ ಆಗಿದೆ. ಇದನ್ನು ಬಿಡುಗಡೆ ಮಾಡಿದ ಮುಖ್ಯ ಅತಿಥಿ ಚಂದ್ರು ಅವರ ತಂದೆ, ‘ಫಾದರ್’. ಹೀಗಾಗು ಇದೊಂದು ಅಪರೂಪದ ಘಟನೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಥೀಮ್ ವಿಡಿಯೋವನ್ನು ನೋಡಿದವರೆಲ್ಲರೂ ಚಪ್ಪಾಳೆ ತಟ್ಟಿ ಗೆಲುವಿನ ಸೂಚನೆ ಸೂಚಿಸಿದರು. ‘ಕಬ್ಜಾ’ ಚಂದ್ರು ಆಗಿ ಭಾರತೀಯ ಚಿತ್ರರಂಗ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಚಂದ್ರು, ಕನ್ನಡ ಪ್ರೇಕ್ಷಕರಿಗೆ ಮತ್ತೆ ‘ತಾಜ್ ಮಹಲ್’, ‘ಚಾರ್ ಮಿನಾರ್’ ರೀತಿಯ ಎಮೋಷನ್ ಸಿನಿಮಾ ಕೊಡಲು, ನಿರ್ದೇಶಕ ರಾಜ್ ಮೋಹನ್ ಗೆ ಒಪ್ಪಿಸಿದ್ದಾರೆ.

‘ಫಾದರ್’ ಅಂದಾಕ್ಷಣ, ಪ್ರತಿಯೊಬ್ಬರಿಗೂ ನೆನಪಾಗೋದೇ ಅಪ್ಪ, ಬಾಲ್ಯದ ನೆನಪು. ನಮ್ಮ ಬದುಕು ರೂಪಿಸುವ ಜೀವ ಅಪ್ಪ. ಅಂತಹ ಅಪ್ಪನ ಕುರಿತು ಆರ್ ಚಂದ್ರು ಅಪರೂಪದ ಕಥಾ ಹಂದರ ಹೊಂದಿರುವ, ಅಪ್ಪ ಮಗನ ವ್ಯಾಲ್ಯೂ ತಿಳಿಸುವ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ.
‘ಫಾದರ್’ ಭಾವುಕ ಪಯಣಕ್ಕೆ ಕರೆದೊಯ್ಯುವ, ಕಣ್ಣಂಚಲ್ಲಿ ನೀರು ತರೆಸುವ, ಹೃದಯದ ಬಡಿತ ಹೆಚ್ಚಿಸುವ, ಅಪ್ಪನ ಬೆಲೆ ತಿಳಿಸುವ, ಚಿತ್ರ ಆಗಿದೆ ಎನ್ನುವ ಸೂಚನೆ, ಈ ಥೀಮ್ ವಿಡಿಯೋ ನೋಡಿದವರಿಗೆ ಗೊತ್ತಾಗುತ್ತಿದೆ. ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್, ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಹಾಗೂ ಆರ್ ಚಂದ್ರು ಸುಪರ್ದಿ, ಈ ಅಪರೂಪದ ಕಾಂಬೋದಲ್ಲಿ ಬರುತ್ತಿರುವ ‘ಫಾದರ್’, ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
‘ಫಾದರ್’ ಚಿತ್ರಕ್ಕೆ ರಾಜಮೋಹನ್ ನಿರ್ದೇಶನ ಮಾಡಿದ್ದಾರೆ, ಸುಜ್ಞಾನ್ ಛಾಯಾಗ್ರಹಣ, ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.


