ಏಕೀಕರಣ ಹೋರಾಟದಲ್ಲಿ ಬಳ್ಳಾರಿಯ ಕೊಡುಗೆ ಅಪಾರವಾದದ್ದು : ಕುಲಪತಿ ಮುನಿರಾಜು

Ravi Talawar
ಏಕೀಕರಣ ಹೋರಾಟದಲ್ಲಿ ಬಳ್ಳಾರಿಯ ಕೊಡುಗೆ ಅಪಾರವಾದದ್ದು : ಕುಲಪತಿ ಮುನಿರಾಜು
WhatsApp Group Join Now
Telegram Group Join Now
ಬಳ್ಳಾರಿ ಡಿಸೆಂಬರ್ 14 :  ಬಳ್ಳಾರಿ ಜಿಲ್ಲೆಯಲ್ಲಿ ನಡೆದ  ಐತಿಹಾಸಿಕ ಮತ್ತು ಸಾಂಸ್ಕೃತಿಕ  ಸಂಗತಿಗಳನ್ನು ದಾಖಲಿಸುವ  ಕಾರ್ಯವಾಗಬೇಕಿದೆ, ಅದನ್ನು ಸಾಹಿತಿ ಸಿದ್ದರಾಮ ಕಲ್ಮಠ ತಮ್ಮ ಇತ್ತೀಚಿನ  ಪೈಲ್ವಾನ್ ರಂಜಾನ್ ಸಾಬ್ ಕೃತಿಯಲ್ಲಿ ದಾಖಲಿಸಲು ಸಫಲರಾಗಿದ್ದಾರೆ ಎಂದು ನನ್ನ ಅನಿಸಿಕೆಯಾಗಿದೆ,  ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ನಡೆಸಿದ ಹೋರಾಟಅವಿಸ್ಮರಣೀಯವಾದುದು, ವಿಸ್ಮೃತಿಗೆ ಸರಿದ ಅನೇಕ ಸಂಗತಿಗಳನ್ನು ಮತ್ತೆ ಸ್ಮರಿಸುವ ಮೂಲಕ‌ ಚರಿತ್ರೆಯನ್ನು  ಪುನಃ ಅವಲೋಕಿಸಬೇಕಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ ಮುನಿರಾಜು ಅಭಿಪ್ರಾಯಪಟ್ಟರು.
ಅವರು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ನಡೆದ ಕನ್ನಡ ಸಾಂಸ್ಕೃತಿಕ ಪರಿಷತ್ತು ಮತ್ತು ಪೈಲ್ವಾನ್ ರಂಜಾನ್ ಸಾಬ್ ಗಡಿನಾಡ ಕನ್ನಡ ಸಂಘ ಸಹಯೋಗದಲ್ಲಿ  ಆಯೋಜಿಸಿದ್ದ ಸಾಹಿತಿ ಸಿದ್ದರಾಮ ಕಲ್ಮಠ ಅವರ ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇಲ್ಲಿಯವರೆಗೆ ಬಂದಿರುವ ಇತಿಹಾಸದ ಅನೇಕ ಪುಸ್ತಕಗಳಲ್ಲಿ ಕರ್ನಾಟಕ ಏಕೀಕರಣದ  ಸಂದರ್ಭದಲ್ಲಿ ಹುತಾತ್ಮನಾದ  ರಂಜಾನ್ ಸಾಬ್ ಅವರ ವಿಷಯವು ಬಿಡಿ ಬಿಡಿಯಾಗಿ ದಾಖಲಿಸಲಾಗಿದೆ. ಆದರೆ ಲೇಖಕ ಸಿದ್ದರಾಮ ಕಲ್ಮಠ ತಮ್ಮ ಕೃತಿಯಲ್ಲಿ ರಂಜಾನ್ ಸಾಬ್ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಅವರನ್ನು ಓದುಗರಿಗೆ ಪರಿಚಯಿಸಿ ಚಾರಿತ್ರಿಕವಾಗಿ ಆಕರವಾಗಬಹುದಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
 ಕೃತಿಯನ್ನು ಕುರಿತು ಮಾತನಾಡಿದ ಲೇಖಕ ಎಂ.ಎಂ. ಶಿವಪ್ರಕಾಶ್,   ಕರ್ನಾಟಕ ಏಕೀಕರಣದಲ್ಲಿ ಏಕೈಕ ಬಲಿದಾನವಾದ ಪಿಂಜಾರ ರಂಜಾನ್ ಸಾಬ್ ರವರ ಜೀವನ ಕಥನವನ್ನು ಯಾವುದೇ ರೀತಿಯಲ್ಲಿ ವೈಭವೀಕರಿಸದೆ ವಸ್ತು ನಿಷ್ಠ ವಿಷಯಗಳನ್ನು ದಾಖಲಿಸಿ ಸಾಮಾನ್ಯ ಓದುಗ ಮತ್ತು ವಿದ್ಯಾರ್ಥಿಗಳು ಓದಿ ಪ್ರೇರಣೆ ಪಡೆಯುವಂತಹ ಕೃತಿಯಾಗಿಸಿದ್ದಾರೆ, ಬಳ್ಳಾರಿಯ ಹೋರಾಟದ  ಕುತೂಹಲಕಾರಿ ಚರಿತ್ರೆಯನ್ನು ಕೃತಿಯು ನಮ್ಮ‌ ಮುಂದೆ ತೆರೆದಿಡುತ್ತದೆ. ಬಳ್ಳಾರಿ ಜಿಲ್ಲೆಯು ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದ್ದು, ಭಾಷೆಯ ಮತ್ತು ಪ್ರಾದೇಶಿಕ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣೆ ನಡೆದದ್ದು ದೇಶದಲ್ಲಿಯೇ ಪ್ರಥಮ.ಈ ನಿರ್ಣಾಯಕ ಚುನಾವಣೆಯಲ್ಲಿ ಕನ್ನಡ ಪರ ಅಭ್ಯರ್ಥಿ ಹರಗಿನಡೋಣಿ ಸಣ್ಣ ಬಸವನಗೌಡರು ಸ್ಪರ್ಧಿಸಿ ಜಯಗಳಿಸಿದ್ದು ಚಾರಿತ್ರಿಕ ಘಟನೆ ಎಂದು ಅಭಿಪ್ರಾಯಪಟ್ಟರು.
 ಸಾಹಿತಿ, ಕೃತಿ ರಚನೆಕಾರ ಸಿದ್ದರಾಮ ಕಲ್ಮಠ ಮಾತನಾಡಿ, ಏಕೀಕರಣದ ಹೋರಾಟದಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿ, ಕೋ ಚನ್ನಬಸಪ್ಪ, ಹರಗಿನ ಡೋಣಿ ಸಣ್ಣಬಸವನಗೌಡ, ವೈ ನಾಗೇಶ್ ಶಾಸ್ತ್ರಿ, ವೈ ಮಹಾಬಲೇಶ್ವರಪ್ಪ, ಅಲ್ಲಂ ಕರಿಬಸಪ್ಪ, ಅಲ್ಲಂ ಸುಮಂಗಳಮ್ಮ, ತೊಗರಿ ವೀರ ಮಲ್ಲಪ್ಪ ,ರಜಾಕ್ ಸಾಹೇಬ್, ಜೋಳದರಾಶಿ ದೊಡ್ಡನಗೌಡ  ಸೇರಿದಂತೆ ಹಲವಾರು ಮಹನೀಯರ ದಿಟ್ಟ ನಿರಂತರ ಚಳವಳಿಯಿಂದಾಗಿ ಬಳ್ಳಾರಿ ಜಿಲ್ಲೆ  ಮೈಸೂರು ರಾಜ್ಯದಲ್ಲಿ ಸೇರ್ಪಡೆಯಾಗಲು ಸಾಧ್ಯವಾಯಿತು ಎಂದು ಹೇಳಿದರು.
 ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಮಾತನಾಡಿ ಭಾಷಾ ದಬ್ಬಾಳಿಕೆ ವಿರುದ್ದ ಹುಟ್ಟಿದ ಆಕ್ರೋಶವು ಅಂತಿಮವಾಗಿ ಕರ್ನಾಟಕ ಏಕೀಕರಣ ಚಳವಳಿಯಾಗಿ ರೂಪುಗೊಂಡಿತು, ಕನ್ನಡಿಗರಲ್ಲಿ ತಮ್ಮದೇ ಆಡಳಿತ ಹೊಂದುವ  ತಮ್ಮ‌ ಭಾಷೆ  ಉಳಿಸಿ ಬೆಳೆಸುವ ಕೆಚ್ಚು ಕಿಚ್ಚಾಗಿ ಎಲ್ಲೆಡೆ  ಹಬ್ಬಿತು. ಬಳ್ಳಾರಿಯು ಏಕೀಕರಣಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದು ಅದರಲ್ಲೂ ಪಿಂಜಾರ ಸಮುದಾಯವು ಬಳ್ಳಾರಿ ಏಕೀಕರಣದ ಹೋರಾಟದ ಸಂದರ್ಭದಲ್ಲಿ ಒಂದಾಗಿ ನಿಂತು ಕನ್ನಡ ಪ್ರೇಮವನ್ನು ಮೆರೆದಿದ್ದು ಚಾರಿತ್ರಿಕವಾಗಿದೆ. ಕನ್ನಡದ ಅಸ್ಮಿತೆಯನ್ನು ಮೈಗೂಡಿಸಿಕೊಂಡಿರುವ ಸಮುದಾಯದ ಜನರ  ಕನ್ನಡಪರ ಹೋರಾಟವು ಶ್ಲಾಘನೀಯ ಎಂದರು.
ವೀ.ವಿ.ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಹೋರಾಟ ಎರಡೂ ಜೊತೆಗೆ ನಡೆದವು.ಕನ್ನಡ ಮಾತನಾಡುವವರನ್ನು ಒಗ್ಗೂಡಿಸಬೇಕೆಂದು ಕನಸು ಕಂಡವರು ನೂರಾರು ಮಂದಿ.ಎಲ್ಲರೂ ಕನ್ನಡ ನಾಡು ಉದಯವಾಗಬೇಕೆಂದು ಒಮ್ಮನಸ್ಸಿನಿಂದ ಹೋರಾಡಿದರು.ಈ ಹೋರಾಟಕ್ಕೆ ಕುವೆಂಪು,ಬೇಂದ್ರೆ, ವಿ.ಕೃ.ಗೋಕಾಕ್,ಶಿವರಾಮ ಕಾರಂತ,ಎಂ.ಗೋವಿಂದ ಪೈ,ಚಂದ್ರಶೇಖರ ಶಾಸ್ತ್ರಿ ಅವರಂತ ಅನೇಕ ಸಾಹಿತಿಗಳ ಬೆಂಬಲ ದೊರೆಯಿತು.ಪತ್ರಿಕೆಗಳು ಮತ್ತು ಮಾಧ್ಯಮಗಳ ವ್ಯಾಪಕ ಬೆಂಬಲವೂ ದೊರೆಯಿತೆಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಗಾಯಕ‌ ಯಲ್ಲನಗೌಡ ಶಂಕರಬಂಡೆ,ಪೈಲ್ವಾನ್ ರಂಜಾನ್ ಸಾಬ್ ಗಡಿನಾಡ ಕನ್ನಡ ಸಂಘದ ಅಧ್ಯಕ್ಷ ಪಿ.ಶರ್ಮಾಸ್ ವಲಿ,  ಹೆಚ್ .ಇ. ಪೌಂಡೇಷನ್  ಅಧ್ಯಕ್ಷ ಹೆಚ್.ದಾದಾ ಕಲಂದರ್, ನಧಾಫ್ ಪಿಂಜಾರ್ ಸಂಘದ ಜಿಲ್ಲಾಧ್ಯಕ್ಷ ಪಿ.ಮೌಲಾಲಿ, ಪಿ.ಶಷಾ ಸಾಬ್, ಪಿ.ಅಮೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕ ಅಮಾತಿ ಬಸವರಾಜ್ ನಿರೂಪಿಸಿದರು, ಉಪನ್ಯಾಸಕ ವಲಿಭಾಷ ಸ್ವಾಗತಿಸಿದರೆ, ಉಪನ್ಯಾಸಕ ಎ.ಎಂ.ಪಿ.ವೀರೇಶ ಸ್ವಾಮಿ ವಂದಿಸಿದರು.
ಜನಪ್ರಿಯ ಗಾಯಕ ದೊಡ್ಡಬಸವ ಗವಾಯಿ ತಂಡದವರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.
WhatsApp Group Join Now
Telegram Group Join Now
Share This Article