ಬೆಳಗಾವಿ: ರಾಗಿ ಉಂಡೆ, ಸಜ್ಜೆ ಕಿಚಡಿ, ಸಿರಿಧಾನ್ಯ ಪಾಯಸ, ಸಾಮೆ ಅನ್ನ, ರಾಗಿ ಕಡಬು, ನವನಕ್ಕಿ ಖಾರದ ವಡೆ, ಹುರಕ್ಕಿ ಹೋಳಿಗೆ… ಹೀಗೆ… ಸಾಲು ಸಾಲಾಗಿ ವಿವಿಧ ಖಾದ್ಯಗಳನ್ನು ಜನರು ಕಂಡಿದ್ದು ಮತ್ತು ಅವುಗಳ ರುಚಿ ಸವಿದಿದ್ದು ಇಲ್ಲಿನ ಕೃಷಿ ಇಲಾಖೆ ಜಂಟಿನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ.
ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳದ ಪ್ರಯುಕ್ತ ಆಯೋಜಿಸಿದ್ದ ಈ ಸ್ಪರ್ಧೆಯು ಸಿರಿಧಾನ್ಯಗಳ ಮಹತ್ವ ಸಾರಿತು̤‘ಜನರು ಅದರಲ್ಲೂ ಮಕ್ಕಳು, ಯುವಕರು ಜಂಕ್‌ಫುಡ್ ಸೇವನೆಯಿಂದ ಹೊರಬಂದು, ಸಿರಿಧಾನ್ಯಗಳನ್ನು ಸೇವಿಸಿದರೆ ಸದೃಢ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂಬ ಸಂದೇಶ ಸಾರಿತು.
ಮರೆತು ಹೋದ ಖಾದ್ಯ, ಸಿರಿಧಾನ್ಯ ಸಿಹಿಖಾದ್ಯ ಹಾಗೂ ಸಿರಿಧಾನ್ಯ ಖಾರಖಾದ್ಯ ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ಸಂಘಟಿಸಲಾಗಿತ್ತು. ಜಿಲ್ಲೆ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಮಹಿಳೆಯರು ಸಿರಿಧಾನ್ಯ ಬಳಸಿ, ವಿವಿಧ ಖಾದ್ಯ ತಯಾರಿಸಿದರು.
ಜೋಳದ ಕಿಚಡಿ, ತಾಲಿಪಟ್ಟಿ, ಸಿರಿಧಾನ್ಯ ಬಿಸಿಬೇಳೆ ಬಾತ್, ಅಂಬಲಿ, ರಾಗಿ ಬಿಸ್ಕತ್ತು, ರಾಗಿ ಮೋದಕ, ಸಾಂಬಾರ ಬುತ್ತಿ ಮತ್ತಿತರ ಖಾದ್ಯಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಸಿರಿಧಾನ್ಯ ಬಳಸಿ ತಯಾರಿಸಿದ್ದ ಕೇಕ್ ಎಲ್ಲರ ಗಮನಸೆಳೆಯಿತು.

ಅದನ್ನು ಕತ್ತರಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,‘ಸಿರಿಧಾನ್ಯಗಳು ಪೋಷಕಾಂಶಗಳ ಆಗರವಾಗಿವೆ. ಸಿರಿಧಾನ್ಯಗಳ ಮಹತ್ವವನ್ನು ಯುವಪೀಳಿಗೆಗೆ ಪರಿಚಯಿಸಬೇಕೆಂದರೆ ಇಂಥ ಕಾರ್ಯಕ್ರಮ ಅಗತ್ಯ’ ಎಂದರು.
ಕೃಷಿ ಇಲಾಖೆ ಜಂಟಿನಿರ್ದೇಶಕ ಎಚ್.ಡಿ.ಕೋಳೇಕರ, ಸಿರಿಧಾನ್ಯ ಬೆಳೆಯುವುದು, ಸೇವಿಸುವುದನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆಯಿಂದ ವಾಕಥಾನ್, ಪಾಕ ಸ್ಪರ್ಧೆ ಮೊದಲಾದ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು. ತೀರ್ಪುಗಾರರಾಗಿ ಲೇಕ್‌ವ್ಯೂ ಆಸ್ಪತ್ರೆ ಆಹಾರ ತಜ್ಞೆ ಡಾ.ಅನಿತಾ ಭಾವಿ, ಮತ್ತಿಕೊಪ್ಪದ ಕೆಎಲ್‌ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಭಾವಿನಿ ಪಾಟೀಲ, ತುಕ್ಕಾನಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರೇಖಾ ಕಾರಬಾರಿ ಭಾಗವಹಿಸಿದ್ದರು. ಸಹದೇವ ಯರಗೊಪ್ಪ ನಿರೂಪಿಸಿದರು.
ಸಿರಿಧಾನ್ಯ ಖಾರ ವಿಭಾಗದಲ್ಲಿ ವಿಜೇತ ಸ್ಪರ್ಧಿಗಳು : ಪ್ರಥಮ – ಸುಮನ ಸಂತೋಷ ಕೋಕಣ, ಅಂಜನೇಯ ನಗರ, ಬೆಳಗಾವಿ (ಸಿರಿಧಾನ್ಯ ಬೀಸಿ ಬೇಳೆ ಬಾತ), ದ್ವೀತಿಯ – ರೇಣುಕಾ ನಿತಿನ ಹಾವಳ ಖಡೇಬಜಾರ ಬೆಳಗಾವಿ (ಸಜ್ಜೆ ಚಿರೋಟಿ), ತೃತೀಯ – ಸುಗಂಧಾ ವಿ. ಉರಣಕರ ಖಡೇಬಜಾರ ಬೆಳಗಾವಿ (ಜೋಳದ ಚಕ್ಕಲಿ)

ಸಿರಿಧಾನ್ಯ ಸಿಹಿ ವಿಭಾಗದಲ್ಲಿ ವಿಜೇತ ಸ್ಪರ್ಧಿಗಳು : ಪ್ರಥಮ – ಕಾವೇರಿ ಚನ್ನಬಸಪ್ಪ ಹುಕ್ಕೇರಿ ಹುಕ್ಕೇರಿ (ನವಣೆ ಲಡ್ಡು), ದ್ವೀತಿಯ- ರೂಪಾ ಆಧಿನಾಥ ಪಾಟೀಲ ಹೆಬ್ಬಾಳ, ಹುಕ್ಕೇರಿ (ಬಿಸ್ಕತ್ತು), ತೃತೀಯ -ಜಯಶ್ರೀ ರಾ. ಕಾಂಬಳೆ ಡೊಣವಾಡ, ಚಿಕ್ಕೋಡಿ (ರಾಗಿ ಕಡಬು),
ಮರೆತು ಹೋದ ಖಾದ್ಯ ವಿಭಾಗದಲ್ಲಿ ವಿಜೇತ ಸ್ಪರ್ಧಿಗಳು : ಪ್ರಥಮ – ಸುರೇಖಾ ದೇಯನ್ನವರ ರಾಮತೀರ್ಥ ನಗರ, ಬೆಳಗಾವಿ (ಜೋಳದ ಕಡಬು), ದ್ವೀತಿಯ -ಗಾಯತ್ರಿ ಮಹೇಶ ಪಾಟೀಲ ನೇಜ, ಚಿಕ್ಕೋಡಿ (ಸಜ್ಜೆ ಅನ್ನ), ತೃತೀಯ- ಶೋಭಾ ಬಸಪ್ಪ ಕೋಡ್ಲ್ಯಾರ ವಂಟಮೂರಿ, ಬೆಳಗಾವಿ (ಜೋಳಧ ನುಚ್ಚಿನ ಹುಳಿಬಾನ)



