ವೈಜ್ಞಾನಿಕವಾಗಿ ಸರ್ವೇ ಕಾರ್ಯಕೈಗೊಳ್ಳಿ: ಸಿಇಓ ರಾಹುಲ್ ಶಿಂಧೆ

Hasiru Kranti
ವೈಜ್ಞಾನಿಕವಾಗಿ ಸರ್ವೇ ಕಾರ್ಯಕೈಗೊಳ್ಳಿ: ಸಿಇಓ ರಾಹುಲ್ ಶಿಂಧೆ
WhatsApp Group Join Now
Telegram Group Join Now

ಇ- ಸ್ವತ್ತು ಅಭಿಯಾನ ನಿರ್ವಹಣಾ ಸಮಿತಿ ಸಭೆ

ಬೆಳಗಾವಿ: ಇ-ಸ್ವತ್ತು ಸರ್ವೇಯನ್ನು ರೋವರ್ ಸಿಸ್ಟಮ್ ಗಳ ಮೂಲಕ ವೈಜ್ಞಾನಿಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಇ-ಸ್ವತ್ತು ಅಭಿಯಾನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೂದಾಖಲೆಗಳ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಸಂಬಂಧಿಸಿದ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇ-ಸ್ವತ್ತು ಮಾದರಿ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಗ್ರಾಮದ ಒಳಗಿನ ಸಾರ್ವಜನಿಕರ ಆಸ್ತಿಗಳ ಸರ್ವೇ ಕಾರ್ಯಗಳನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಭೂದಾಖಲೆಗಳ ಇಲಾಖೆಯವರು ಮಾದರಿಗಾಗಿ ಆಯ್ಕೆ ಮಾಡಿದ ಚನ್ನಮ್ಮನ ಕಿತ್ತೂರು ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಯನ್ನು 15 ದಿನಗಳೊಳಗಾಗಿ ಗುರುತಿಸಬೇಕು. ಇದಕ್ಕಾಗಿ ಕ್ವಾಂಟಮ್ ಜಿ.ಐ.ಎಸ್. ಸಾಪ್ಟವೇರ್ ಹಾಗೂ ರೋವರ್ ಸಿಸ್ಟಮ್ ಗಳನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಮ ಠಾಣಾ ವ್ಯಾಪ್ತಿಯನ್ನು ಗುರುತಿಸಿ ಗ್ರಾಮ ಠಾಣಾ ಒಳಗಿನ ಆಸ್ತಿಗಳ ಸರ್ವೇಯಿಂದ ಬಂದಂತಹ ಮಾಹಿತಿಯ ಕರಡು ನಕ್ಷೆ ಸಿದ್ಧಪಡಿಸಬೇಕು. ತಯಾರಿಸಿದ ಕರಡು ನಕ್ಷೆಗೆ ಗ್ರಾಮ ಪಂಚಾಯತ ವತಿಯಿಂದ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಬಂದಂತಹ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅಂತಿಮ ನಕ್ಷೆಗೆ ಅನುಮತಿ ನೀಡಬೇಕು ಎಂದು ನಿರ್ದೇಶಿಸಿದರು.

ಆಕ್ಷೇಪಣೆ ಇಲ್ಲದ ಆಸ್ತಿಗಳನ್ನು ಹಸಿರು ಬಣ್ಣದಿಂದ, ಆಕ್ಷೇಪಣೆ ಬಂದ ಆಸ್ತಿಗಳನ್ನು ಹಳದಿ ಬಣ್ಣದಿಂದ ಹಾಗೂ ಅತಿಕ್ರಮಣಗೊಂಡ ಆಸ್ತಿಗಳನ್ನು ಕೆಂಪು ಬಣ್ಣದಿಂದ ಗುರುತಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಕಿರಣ ಘೋರ್ಪಡೆ, ಚನ್ನಮ್ಮನ ಕಿತ್ತೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ, ಸಹಾಯಕ ನಿರ್ದೇಶಕ (ಪಂರಾ) ವಿಜಯ ಪಾಟೀಲ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

WhatsApp Group Join Now
Telegram Group Join Now
Share This Article