ಬೆಂಗಳೂರು: ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರದ ಪ್ರಮುಖರನ್ನು ಸಿಲುಕಿಸಲು ED ಮೂಲಕ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕರ್ನಾಟಕ ಗಂಭೀರ ಆರೋಪ ಮಾಡಿದೆ.
ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳ ಹೆಸರು ಹೇಳಲು ಬಂಧಿತರಿಗೆ ಇ.ಡಿ ( ಜಾರಿ ನಿರ್ದೇಶನಾಲಯ) ಒತ್ತಡ ಹೇರುತ್ತಿದೆ ಎಂದು ರಾಜ್ಯಸರ್ಕಾರ ಆರೋಪ ಮಾಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ಪ್ರಮುಖ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಸೇರಿ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ”ವಾಲ್ಮೀಕಿ ಹಗರಣದಲ್ಲಿ ಸರ್ಕಾರದ ಉನ್ನತ ಮಟ್ಟದ ವ್ಯಕ್ತಿಗಳ ಹೆಸರು ಹೇಳಲು ಬಂಧಿತರಿಗೆ ಇ.ಡಿ ( ಜಾರಿ ನಿರ್ದೇಶನಾಲಯ) ಒತ್ತಡ ಹೇರುತ್ತಿದೆ. ವಿರೋಧ ಪಕ್ಷಗಳ ಮೇಲೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ಮೂಲಕ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಇದೇವೇಳೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿರುವ ಹಗರಣಗಳ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು. ಭೂಮಿ ನಿಗಮ, ಅಂಬೇಡ್ಕರ್ ನಿಗಮದಲ್ಲಿ ನಡೆದ ಹಗರಣ, ಕೋವಿಡ್ ಅಕ್ರಮದ ಬಗ್ಗೆ ಏಕೆ ತನಿಖೆ ಮಾಡಿಲ್ಲ? ವಿರೋಧ ಪಕ್ಷದಲ್ಲಿ ಇದ್ದಾಗ ಕೇಸ್ ಹಾಕ್ತಾರೆ, ಬಿಜೆಪಿಗೆ ಬಂದರೆ ಅವರಿಗೆ ಕ್ಲೀನ್ ಚಿಟ್ ನೀಡಲಾಗ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ವಾಮಮಾರ್ಗಗಳನ್ನು ಬಳಸಿ ಏಕ ಪಕ್ಷ ಸಾಮ್ರಾಜ್ಯವನ್ನು ದೇಶದಲ್ಲಿ ಕಟ್ಟುತ್ತಿದೆ.