ಇಂಡಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕಿನಲ್ಲಿ ರವಿವಾರ ನಡೆದ ಮನೆಯಲ್ಲಿ ಮತದಾನದ ಮೂಲಕ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ತೋಟದ ವಸ್ತಿ ನಿವಾಸಿ 102 ವರ್ಷದ ಸಾತವ್ವ ಸಾಲೋಟಗಿ ತುಂಬಾ ಉತ್ಸಾಹದಿಂದ ಮತ ಚಲಾಯಿಸಿದರು. ‘ಬಾಳ್ ವಯಸ್ಸಾಗಿ ಮನ್ಯಾಗ ಇದ್ದ ನನಗ ಓಟ್ ಹಾಕಿಸಿಕೊಳ್ಳಾಕ್ ಮನೀಗಿ ಬಂದಿದ್ದು ಚಲೋ ಆಯ್ತು ನೋಡ್ರಿ ಸಾಹೇಬ್ರ, ನನ್ನಂಗ್ ಎಲ್ರೂ ಓಟ್ ಹಾಕಿದ್ರ ದೇಶ ಚಂದ ಉಳಿತದ’ ಎಂದು ಸಾತವ್ವ ಖುಷಿ ಹಂಚಿಕೊಂಡರು.
ಹಕ್ಕು ಚಲಾಯಿಸಿದ ಮತದಾರರು: ರವಿವಾರದಂದು 85 ವರ್ಷ ದಾಟಿದ ಮತದಾರರಾದ ಸಾತವ್ವ ಸಾಲೋಟಗಿ, ಪರಮವ್ವ ಕುಂಬಾರ, ರಶೀದಾಬೇಗಂ ಅಂಗಡಿ, ರತ್ನಾಬಾಯಿ ಹರವಾಳ, ರೋಶನಬಿ ಮುಲ್ಲಾ ಹಾಗೂ ಅಂಗವಿಕಲ ಮತದಾರರಾದ ಮಹಾಂತೇಶ ಸಾಲೋಟಗಿ, ಶಿವಯೋಗೆಪ್ಪ ಸಾಲೋಟಗಿ, ಅನುಸೂಯಾ ಚಿಂಚೋಳಿ,ದಯಾನಂದ ಮಸಳಿ ಸೇರಿದಂತೆ ಇತರರು ತಮ್ಮ ಹಕ್ಕನ್ನು ಚಲಾಯಿಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಅಧಿಕಾರಿ ಮಹಾಂತೇಶ ಹಿರೇಮಠ, ಪೊಲಿಂಗ್ ಅಧಿಕಾರಿಗಳಾದ ಎಂ ಜಿ ಬಿರಾದಾರ, ರಫೀಕ್ ಮಂಗಲವಾಡೆ,ಸತೀಶಕುಮಾರ ಎನ್, ಎಂ ಎಸ್ ಬಾಣಿಕೋಲ, ಸಿದ್ದಣ್ಣ ಬಡಿಗೇರ ಮತ್ತು ಮತಗಟ್ಟೆ ಅಧಿಕಾರಿಗಳಾದ ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಶಾಂತೇಶ ಹಳಗುಣಕಿ, ಎಸ್ ವ್ಹಿ ಬೇನೂರ, ರಾಜೇಶ್ವರಿ ದಳವಾಯಿ, ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ ಹಂಚಿನಾಳ, ಸಿಬ್ಬಂದಿಗಳಾದ ಶಿವರಾಜ ವಾಲೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.