ವಿಜಯಪುರ: ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅಡ್ಡಪರಿಣಾಮಗಳು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 3 ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ.
ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಮಕ್ಕಳಾದ ಅನುಶ್ರೀ, ಶ್ರೀನಿಧಿ, ದೀಪಾ, ಸಾಕ್ಷಿ, ಸಮೃದ್ಧಿ, ಪವಿತ್ರಾ, ಸಾನ್ವಿ, ಶಾಂತಮ್ಮ, ಉದಯ, ಭಾಗ್ಯಅವರು ಬಟ್ಟೆಯ ಚೀಲ ಪ್ರದರ್ಶಿಸಿ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಆಚರಿಸಿ, ಜಾಗೃತಿ ಮೂಡಿಸಿದ್ದು ಗಮನ ಸೆಳೆಯಿತು.
ಇಂದು ಮನುಷ್ಯನ ಜೀವನವು ಸಂಪೂರ್ಣ ಪ್ಲಾಸ್ಟಿಕ್ ಮಯವಾಗಿದೆ. ದಿನನಿತ್ಯವು ಒಂದಲ್ಲ ಒಂದು ರೀತಿಯಲ್ಲಿ ಪ್ಲಾಸ್ಟಿಕ್ ವಸ್ತುವಿನ ಬಳಕೆ ಮಾಡುತ್ತಿರುತ್ತೇವೆ. ನಾವು ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ಗಳು ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷಗಳೇ ಬೇಕು. ಹೀಗಾಗಿ ಮಾಲಿನ್ಯದ ಪ್ರಮುಖ ಮೂಲವೇ ಇದಾಗಿರುವ ಕಾರಣ, ಪ್ರಾಣಿಗಳಿಗೂ ತೊಂದರೆಯೇ ಹೆಚ್ಚು. ಪೇಪರ್ ಬ್ಯಾಗ್ಗಳು, ಮರುಬಳಕೆಯ ಹತ್ತಿ ಚೀಲಗಳ ಬಳಕೆಯ ಅಭ್ಯಾಸವನ್ನು ಪ್ರತಿಯೊಬ್ಬರು ರೂಢಿಸಿಕೊಂಡರೆ, ಪರಿಸರವನ್ನು ಮಾಲಿನ್ಯದಿಂದ ಮುಕ್ತ ಗೊಳಿಸಲು ಸಾಧ್ಯ.
ಪ್ಲಾಸ್ಟಿಕ್ ಬಳಕೆ ವಿರುದ್ಧದ ಆಂದೋಲನ ಮೊದಲು ನಮ್ಮ ಮನೆಗಳಿಂದಲೇ ಆರಂಭವಾಗಬೇಕಿದೆ. ಅಂಗಡಿಗಳಿಗೆ ಹೋಗುವಾಗ ಕೈಯಲ್ಲಿ ಬಟ್ಟೆ ಚೀಲ ಹಿಡಿದುಕೊಂಡು ಹೋಗುವುದನ್ನು ನಾವು ರೂಢಿಸಿಕೊಳ್ಳಬೇಕು. ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲ ಕೊಡುವುದು ನಿಲ್ಲಿಸಿ, ಬಟ್ಟೆ ಚೀಲ ಬಳಸುವ ಜಾಗೃತಿ ಮೂಡಿಸಬೇಕಿದೆ.