ಬೆಂಗಳೂರು,20: ಐಟಿ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ ಆರ್ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಭಾನುವಾರ ಸಾಯಂಕಾಲದಿಂದ ಇಂದು ಸೋಮವಾರ ನಸುಕಿನ ಜಾವದವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.
CCBಯ ಆಂಟಿ ನಾರ್ಕೋಟಿಕ್ಸ್ ವಿಭಾಗವು ದಾಳಿಯ ನಂತರ ಶೋಧ ಕಾರ್ಯ ನಡೆಸಿದಾಗ ಅಪಾರ ಪ್ರಮಾಣದ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಗಳು ಸಿಕ್ಕಿವೆ. ಪಾರ್ಟಿ ಆಯೋಜಕ ವಾಸು ಸೇರಿದಂತೆ ಐವರನ್ನು ಸಿಸಿಬಿ ಬಂಧಿಸಿದೆ. ಪಾರ್ಟಿಯಲ್ಲಿ ಹಾಜರಿದ್ದ ಮೂವರು ಡ್ರಗ್ ದಂಧೆಕೋರರನ್ನು ಸಹ ಬಂಧಿಸಲಾಗಿದೆ. ಅದೇ ವೇಳೆ ಫಾರ್ಮ್‌ಹೌಸ್‌ನಲ್ಲಿ ಎಂಡಿಎಂಎ ಮತ್ತು ಕೊಕೇನ್ ಸೇರಿದಂತೆ 45 ಗ್ರಾಂ ಡ್ರಗ್ಸ್ ಪತ್ತೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪ ಜಿಆರ್ ಫಾರ್ಮ್ ಹೌಸ್‌ನಲ್ಲಿ ನಡೆದ ಈ ಪಾರ್ಟಿಯನ್ನು ಹೈದರಾಬಾದ್ ಮೂಲದ ವಾಸು ಆಯೋಜಿಸಿದ್ದರು. ಪಾರ್ಟಿಯಲ್ಲಿ ಆಂಧ್ರಪ್ರದೇಶ ಮತ್ತು ಬೆಂಗಳೂರಿನಿಂದ 100 ಕ್ಕೂ ಹೆಚ್ಚು ಭಾಗವಹಿಸಿದ್ದರು. ಪಾರ್ಟಿಗೆ ಬಂದವರಲ್ಲಿ 25ಕ್ಕೂ ಹೆಚ್ಚು ಯುವತಿಯರು, ಡಿಜೆಗಳು, ರೂಪದರ್ಶಿಗಳು, ಟೆಕ್ಕಿಗಳು, ತೆಲುಗು ನಟಿಯರು ಇದ್ದರು ಎನ್ನಲಾಗುತ್ತಿದೆ. ಪಾರ್ಟಿಯನ್ನು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಎಂದು ಆಯೋಜಿಸಲಾಗಿತ್ತು. ನಿನ್ನೆ ಸಂಜೆ 5 ಗಂಟೆಗೆ ಪ್ರಾರಂಭವಾಗಿ ಇಂದು ಬೆಳಗ್ಗೆ 6 ಗಂಟೆಯವರೆಗೆ ಮುಂದುವರಿಸುವ ಯೋಜನೆಯಲ್ಲಿದ್ದರು. ಒಂದು ದಿನದ ಕಾರ್ಯಕ್ರಮಕ್ಕಾಗಿ ಸುಮಾರು 30 ರಿಂದ 50 ಲಕ್ಷ ರೂಪಾಯಿ ಖರ್ಚು ಮಾಡಿದ್ದರು, ಪಾರ್ಟಿ ನಡೆದ ಫಾರ್ಮ್‌ಹೌಸ್ ಗೋಪಾಲ ರೆಡ್ಡಿ ಅವರ ಒಡೆತನದಲ್ಲಿದೆ.
ದಾಳಿಯ ವೇಳೆ ಪೊಲೀಸರು ಸ್ಥಳದಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಆಂಧ್ರದ ಶಾಸಕರ ಪಾಸ್‌ಪೋರ್ಟ್ ಪತ್ತೆ ಹಚ್ಚಿದ್ದಾರೆ. ಪಾಸ್ ಪೋರ್ಟ್ ಶಾಸಕ ಕಾಕಣಿ ಗೋವರ್ಧನ ರೆಡ್ಡಿ ಅವರದ್ದಾಗಿದೆ. ಹೆಚ್ಚುವರಿಯಾಗಿ, ಮರ್ಸಿಡಿಸ್-ಬೆನ್ಜ್, ಜಾಗ್ವಾರ್ ಮತ್ತು ಆಡಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಉನ್ನತ-ಮಟ್ಟದ ಕಾರುಗಳು ಸ್ಥಳದಲ್ಲಿ ಕಂಡುಬಂದಿವೆ.
ರೇವ್ ಪಾರ್ಟಿ ಕಾನೂನು ಅವಧಿಯನ್ನು ಮೀರಿ ವಿಸ್ತರಿಸುತ್ತಿದ್ದಂತೆ, ಸಿಸಿಬಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ನಾರ್ಕೋಟಿಕ್ಸ್ ಸ್ನಿಫರ್ ಡಾಗ್‌ಗಳೊಂದಿಗೆ ಆವರಣದಲ್ಲಿ ಸಂಪೂರ್ಣ ಶೋಧ ನಡೆಸಿದರು. ಇಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾಗಿಯಾಗಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಲು ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಸ್ಥಳದ ಕೂಲಂಕಷ ಪರಿಶೀಲನೆ ಮುಂದುವರೆಸಿದ್ದಾರೆ.