ಪರಪ್ಪನ ಅಗ್ರಹಾರ ಜೈಲಿನ  ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ

Ravi Talawar
ಪರಪ್ಪನ ಅಗ್ರಹಾರ ಜೈಲಿನ  ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್ 17: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ಬೆಂಗಳೂರಿನ  ಪರಪ್ಪನ ಅಗ್ರಹಾರ ಜೈಲಿನ  ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳವಾರ 50ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಜೈಲಿನಿಂದಲೇ ಸಂಚು ಹೂಡಲಾಗಿದೆ ಎಂಬ ಸುಳಿವಿನ ಮೇರೆಗೆ ಸಿಸಿಬಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಜೈಲಿನಿಂದಲೇ ಕೊಲೆಗೆ ಸುಪಾರಿ ನೀಡಿರುವುದು, ಉಗ್ರ ಚಟುವಟಿಕೆಗಳ ನಂಟು ಹೊಂದಿರುವುದು ಮತ್ತು ಜೈಲಿನಿಂದಲೇ ಮತದಾರರ ಮೇಲೆ ಪ್ರಭಾವ ಬೀರಲು ಸಂಚು ಬಗ್ಗೆ ಮಾಹಿತಿ ದೊರೆತಿದೆ. ಹೀಗಾಗಿ ದಾಳಿ ನಡೆಸಲಾಗಿದೆ. ಈ ವೇಳೆ ಜೈಲಿನ ಬ್ಯಾರಕ್​​ನಲ್ಲಿದ್ದ ಕೆಲ ಖೈದಿಗಳ ಬಳಿಯಿಂದ ನಗದು ವಶಕ್ಕೆ ಪಡೆಯಲಾಗಿದೆ. ಜೈಲಿನೊಳಗೆ ಚಾಕು ಸಹ ಪತ್ತೆಯಾಗಿದೆ. ಕೈದಿಗಳ ಬಳಿ ಇದ್ದ 40 ಸಾವಿರ ರೂ. ನಗದು, 3 ಚಾಕು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಾಗೃಹದ ಒಳಗಿನಿಂದ ಚುನಾವಣೆ ಮೇಲೆ ಪ್ರಭಾವ ಬೀರಲು ಪಿತೂರಿ, ಅಕ್ರಮ ಚಟುವಟಿಕೆಗಳು, ಡ್ರಗ್ಸ್ ಬಳಕೆ, ಪೂರೈಕೆ ಮತ್ತು ಮೊಬೈಲ್ ಬಳಕೆಯನ್ನು ಪರಿಶೀಲಿಸಲು ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗದು, ತಂಬಾಕು ಉತ್ಪನ್ನಗಳು ಮತ್ತು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೂ ಪರಪ್ಪನ ಅಗ್ರಹಾರ ಜೈಲಿಗೂ ನಂಟಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ಸಿಸಿಬಿ ದಾಳಿ ವೇಳೆ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಸಾಧ್ಯತೆ ಇದೆ ಎಂದು ಕೆಲವು ಮೂಗಳು ತಿಳಿಸಿವೆ. ಶಿವಮೊಗ್ಗದಲ್ಲಿ ಐಎಸ್​ಐಎಸ್ ಉಗ್ರ ಚಟುವಟಿಕೆಗೆ ಸಂಬಂಧಿಸಿ ಶಂಕಿತ ಉಗ್ರನೊಬ್ಬನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಎನ್​ಐಎ ಇತ್ತೀಚೆಗೆ ಬಂಧಿಸಿತ್ತು.

WhatsApp Group Join Now
Telegram Group Join Now
Share This Article