ನವದೆಹಲಿ: ಬಾಕಿ ಇರುವ ನೀರನ್ನು ಬಿಡುಗಡೆ ಮಾಡಲು ಮತ್ತು ರಾಜ್ಯಕ್ಕೆ ಕಾವೇರಿ ನದಿ ನೀರು ಹರಿವಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಗುರುವಾರ ತಿರಸ್ಕರಿಸಿದೆ.
ಉಭಯ ರಾಜ್ಯಗಳು ತಮ್ಮ ಕುಡಿಯುವ ನೀರಿನ ಅವಶ್ಯಕತೆಗೆ ಆದ್ಯತೆ ನೀಡುವಂತೆ ಸಮಿತಿ ಆದೇಶಿಸಿದೆ. ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಯನ್ನು ಹಂಚಿಕೊಳ್ಳುವ ಉಭಯ ರಾಜ್ಯಗಳಲ್ಲಿ ನೀರಿನ ಕೊರತೆಯನ್ನು ನಿವಾರಿಸಿದೆ. ಪ್ರತಿ ದಿನ ಕೇವಲ 150 ಕ್ಯೂಸೆಕ್ ನೀರು ಬರುತ್ತಿದ್ದ ಅಂತರರಾಜ್ಯ ಗಡಿ ಬಿಂದು ಬಿಳಿಗುಂಡ್ಲುವಿಗೆ ಕಳೆದ ಐದು ದಿನಗಳಿಂದ ದಿನಕ್ಕೆ ಸುಮಾರು 1,100 ಕ್ಯೂಸೆಕ್ ನೀರು ಬರುತ್ತಿದೆ.
96ನೇ ಸಭೆಯ ಅಧ್ಯಕ್ಷತೆಯ ನಂತರ ಟಿಎನ್ಐಇ ಜೊತೆಗೆ ಮಾತನಾಡಿದ ಸಿಡಬ್ಲ್ಯುಆರ್ಸಿ ಅಧ್ಯಕ್ಷ ವಿನೀತ್ ಗುಪ್ತಾ, ಎರಡೂ ರಾಜ್ಯಗಳು ತಮ್ಮ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಆಯಾ ಜಲಾಶಯಗಳಲ್ಲಿ ಸಾಕಷ್ಟು ನೀರನ್ನು ಹೊಂದಿವೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ಜಲವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯುಡಿಟಿ) ಅಂತಿಮ ತೀರ್ಪಿನ ಪ್ರಕಾರ, ಪರಿಸರ ಹರಿವನ್ನು ಕಾಪಾಡಿಕೊಳ್ಳುವಂತೆ ಕರ್ನಾಟಕಕ್ಕೆ ಸಮಿತಿ ಆದೇಶಿಸಿದೆ.
ಸಿಡಬ್ಲ್ಯುಡಿಟಿ ಪ್ರಕಾರ, ಕರ್ನಾಟಕವು ಫೆಬ್ರುವರಿಯಿಂದ ಮೇವರೆಗೆ ದಿನಕ್ಕೆ ಸುಮಾರು 1,000 ಕ್ಯೂಸೆಕ್ ನೀರು ಬಿಡುವ ಮೂಲಕ ಬಿಳಿಗುಂಡ್ಲುವಿನಲ್ಲಿ ಪರಿಸರದ ಹರಿವನ್ನು ಕಾಪಾಡಿಕೊಳ್ಳಬೇಕು. ಈ ಆದೇಶವು ಸಾಮಾನ್ಯ ವರ್ಷಕ್ಕೆ ಅನ್ವಯವಾಗುತ್ತದೆ ಮತ್ತು ಬರದಿಂದ ತತ್ತರಿಸಿರುವ 2023-24 ರಂತಹ ಸಂಕಷ್ಟದ ವರ್ಷಕ್ಕೆ ಅಲ್ಲ ಎಂದಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿಗೆ (ಸಿಡಬ್ಲ್ಯುಆರ್ಸಿ) ಸಲ್ಲಿಸಿರುವ ಅರ್ಜಿಯಲ್ಲಿ, ತಮಿಳುನಾಡು ರಾಜ್ಯವು ಸಂಕಷ್ಟದ ವರ್ಷಗಳಲ್ಲಿ ನೀರು ಹಂಚಿಕೆ ಮಾಡಲು ವೈಜ್ಞಾನಿಕವಾಗಿ ಆಧಾರಿತ ಸೂತ್ರಕ್ಕಾಗಿ ವಿನಂತಿ ಮಾಡಿದೆ.