ನವದೆಹಲಿ: ಜನ ಗಣತಿ ಜೊತೆಗೆ ಜಾತಿ ಗಣತಿ ನಡೆಸುವುದಾಗಿ ಪ್ರಕಟಿಸಿರುವ ಕೇಂದ್ರ ಸರ್ಕಾದ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್, ಗಣತಿ ನಡೆಸುವ ದಿನಾಂಕವನ್ನು ಪ್ರಕಟಿಸಲು ಆಗ್ರಹಿಸಿದೆ.
ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಪಕ್ಷವು, “ಡೆಡ್ ಲೈನ್ ನೀಡದೆ ಹೆಡ್ ಲೈನ್” ನೀಡುವುದರಲ್ಲಿ ನಿಪುಣರು. ಜಾತಿ ಮತ್ತು ಜನ ಗಣತಿ ಯಾವಾಗ ನಡೆಯುತ್ತದೆ ಎಂಬುದರ ದಿನಾಂಕವನ್ನು ಸರ್ಕಾರ ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.
“ಸರ್ಕಾರದ ಉದ್ದೇಶದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಜನಗಣತಿಯನ್ನು ಸಾಧ್ಯವಾದಷ್ಟು ಬೇಗ ಮಾಡಬೇಕು. ಪ್ರಧಾನಿ ಮೋದಿ ಅವರು ಬರಿಯ ಹೆಡ್ ಲೈನ್ ನೀಡುತ್ತಾರೆ. ಡೆಡ್ ಲೈನ್ ನೀಡುವುದಿಲ್ಲ. ಮೀಸಲಾತಿಗೆ ಇರುವ ಶೇಕಡಾ 50ರಷ್ಟು ಮಿತಿಯನ್ನು ತೆಗೆದುಹಾಕಬೇಕು. ಇದನ್ನು ಮಾಡಲು ಕೇಂದ್ರಕ್ಕೆ ಏನು ಅಡ್ಡಿ ಇದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಪ್ರಶ್ನಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂವಿಧಾನಕ್ಕೆ ತಿದ್ದುಪಡಿ ತಂದು, ಮೀಸಲಾತಿ ಮೇಲಿನ ಶೇ.50ರಷ್ಟು ಮಿತಿಯನ್ನು ತೆಗೆದುಹಾಕಬೇಕು. ಆಗ ಮಾತ್ರ ಜಾತಿ ಜನಗಣತಿಗೆ ಅರ್ಥ ಬರಲಿದೆ” ಎಂದರು.