ಬಳ್ಳಾರಿ ಏಪ್ರಿಲ್ 07:..ಕ್ಯಾನ್ಸರ್ ರೋಗವನ್ನು ಆರಂಭದಲ್ಲಿ ಪತ್ತೆ ಹಚ್ಚಿದರೆ ಅದನ್ನು ಸರ್ಜರಿ ಮತ್ತು ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಅಂಕೋಲಜಿ ಮತ್ತು ರೋಬೋಟಿಕ್ ಸರ್ಜರಿ ವಿಭಾಗದ ಸಲಹೆಗಾರ ಡಾಕ್ಟರ್ ದೇವೇಶ್ ಬಲ್ಲಾಳ್ ತಿಳಿಸಿದರು.
ಅವರು ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ ಕ್ಯಾನ್ಸರ್ ರೋಗವು 2024ರ ಅಂಕಿ ಅಂಶಗಳ ಪ್ರಕಾರ ವಾರ್ಷಿಕವಾಗಿ ಅಂದಾಜು 88000 ಪ್ರಕರಣಗಳು ಪತ್ತೆಯಾಗುತ್ತಿವೆ ಇದರಲ್ಲಿ 26 ಸಾವಿರಕ್ಕೂ ಹೆಚ್ಚು ಜನರು ಈ ಕ್ಯಾನ್ಸರ್ ರೋಗಕ್ಕೆ ಬಲಿಯಾಗುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣವೆಂದರೆ ರೋಗವನ್ನು ತಡವಾಗಿ ಪತ್ತೆಹಚ್ಚುವುದು ಮತ್ತು ಆಧುನಿಕ ಜೀವನಶೈಲಿಯಲ್ಲಿ ಅಪಾಯಕಾರಿ ಅಂಶಗಳಾದ ಜಡತ್ವ ಮತ್ತು ಆಹಾರ ಪದ್ಧತಿಯಿಂದ ಈ ರೋಗವು ಬರುವ ಸಾಧ್ಯತೆ ಹೆಚ್ಚಾಗಿದೆ, ಅತ್ಯಂತ ಮುಖ್ಯವಾಗಿ ಈ ರೋಗವನ್ನು ಪತ್ತೆಹಚ್ಚಲು ತಪಾಸಣೆಯು ಅತ್ಯಂತ ಕಡಿಮೆಯಾಗಿರುತ್ತದೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ತನ ಮತ್ತು ಗರ್ಭಕಂಠ ಕ್ಯಾನ್ಸರಿಗೆ ತುತ್ತಾಗುತ್ತಿದ್ದಾರೆ ಈ ಮಹಿಳೆಯರ ಸಂಕೋಚ ಸ್ವಭಾವವೇ ಅವರನ್ನು ಸಾವಿನಂಚಿಗೆ ಕೊಂಡೊಯ್ಯುತ್ತದೆ ಎಂದು ಕಳವಳವನ್ನು ವ್ಯಕ್ತಪಡಿಸಿದರು.
ಅತ್ಯಂತ ಮುಖ್ಯವಾಗಿ ಶೇಕಡ 25ರಷ್ಟು ಕ್ಯಾನ್ಸರ್ ರೋಗ ಗುಟ್ಕಾ ಸಿಗರೇಟ್ ಬೀಡಿ ಸೇರಿದಂತೆ ತಂಬಾಕು ಸೇವನೆಯಿಂದಲೇ ಹೆಚ್ಚಾಗಿ ಕಂಡು ಬರುತ್ತದೆ ಸರ್ಕಾರ ಈ ಕುರಿತು ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವಿದೆ ಎಂದ ಅವರು ನಗರ ಪ್ರದೇಶದ ಜನರಿಗಿಂತ ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಂಡು ಬರಲು ಈ ರೋಗದ ಬಗ್ಗೆ ಸಾರ್ವಜನಿಕರ ನಿರ್ಲಕ್ಷವೇ ಸಾಕ್ಷಿಯಾಗಿದೆ ಮತ್ತು ಅತ್ಯಂತ ಮುಖ್ಯವಾಗಿ ಕ್ಯಾನ್ಸರ್ ಸ್ಕ್ರೀನಿಂಗ್ ಗ್ರಾಮೀಣ ಪ್ರದೇಶದ ಜನರಿಗೂ ವಿಶೇಷವಾಗಿ ಮಹಿಳೆಯರಿಗೂ ವಿಸ್ತರಣೆಯಾಗಬೇಕಾದ ಅಗತ್ಯವಿದೆ ರೋಗ ಪತ್ತೆ ವಿಳಂಬವಾದಂತೆಲ್ಲ ರೋಗಿಯ ಸಾವಿಗೆ ಕಾರಣವಾಗುತ್ತದೆ ಯಾವುದೇ ಕಾರಣಕ್ಕೂ ಈ ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಾರ್ವಜನಿಕರು ವರ್ಷಕ್ಕೊಮ್ಮೆಯಾದರೂ ಬಯಾಪ್ಸಿ ಪರೀಕ್ಷೆ ಮಾಡಿಸಿಕೊಂಡು ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡಲ್ಲಿ ಈ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದರು.
ಕ್ಯಾನ್ಸರ್ ರೋಗಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು ರೋಬೋಟಿಕ್ ಚಿಕಿತ್ಸೆಯಿಂದ ಕ್ಯಾನ್ಸರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಕ್ಯಾನ್ಸರ್ ರೋಗದ ಕುರಿತು ನಿರ್ಲಕ್ಷ ತಾಳಬಾರದು ಮತ್ತು ಅತ್ಯಂತ ಮುಖ್ಯವಾಗಿ ತಂಬಾಕು ಸೇವನೆಯಿಂದ ಸಾಧ್ಯವಾದಷ್ಟು ದೂರ ಇರಬೇಕು ಎಂದು ಕಿವಿಮಾತು ಹೇಳಿದರು


