ನವದೆಹಲಿ, ಮಾರ್ಚ್ 26: ಮಹತ್ವದ ಬೆಳವಣಿಗೆಯೊಂದರಲ್ಲಿ, ಸರ್ಕಾರಿ ಉದ್ಯೋಗಿಯ ಮನವಿಯ ಮೇರೆಗೆ ಮಾಡಲಾಗುವ ವರ್ಗಾವಣೆಯನ್ನು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದಾಗಿ, ಉದ್ಯೋಗಿಯ ಮನವಿ ಮೇರೆಗೆ ಇನ್ನೊಂದು ಕೇಡರ್ ಅಥವಾ ಇಲಾಖೆಗೆ ವರ್ಗಾವಣೆ ಮಾಡಿದಲ್ಲಿ, ಆತ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯಲ್ಲಿನ ಹಿರಿತನವನ್ನು ಪರಿಗಣಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಈ ಆದೇಶ ಪ್ರಕಟಿಸಿರುವುದು ಅನೇಕ ಸರ್ಕಾರಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.
ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ನಿರ್ದಿಷ್ಟ ಹುದ್ದೆಯನ್ನು ಹೊಂದಿರುವ ಸರ್ಕಾರಿ ನೌಕರನನ್ನು ಬೇರೆ ಇಲಾಖೆ ಅಥವಾ ಕೇಡರ್ಗೆ ವರ್ಗಾವಣೆ ಮಾಡಿದರೆ, ಆತ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಯ ಹಿರಿತನ ಸೇರಿದಂತೆ ಅಸ್ತಿತ್ವದಲ್ಲಿರುವ ಸ್ಥಾನಮಾನವನ್ನು ಹೊಂದಿರಲು ಅರ್ಹನಾಗಿರುತ್ತಾನೆ. ಆದಾಗ್ಯೂ, ಒಬ್ಬ ಅಧಿಕಾರಿಯನ್ನು ಆತನ ಸ್ವಂತ ಕೋರಿಕೆಯ ಮೇರೆಗೆ ವರ್ಗಾವಣೆ ಮಾಡಿದರೆ, ಆಗ ಆತ ವರ್ಗಾವಣೆಗೊಂಡ ಇಲಾಖೆಯ ಇತರ ಉದ್ಯೋಗಿಗಳ ಹಕ್ಕುಗಳು ಮತ್ತು ಸ್ಥಿತಿಗತಿಗಳನ್ನು ಗಮನಿಸಿ ಹಿರಿತನ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಇದ್ದರೆ ಆಗ ಹಿಂದಿನ ಹುದ್ದೆಯ ಹಿರಿತನ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.