ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಇಲಾಖೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇದರ ಪರಿಣಾಮ ಬಸ್ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಶಾಲಾ-ಕಾಲೇಜುಗಳು, ಕಚೇರಿಗಳಿಗೆ ದಿನನಿತ್ಯ ಓಡಾಡುವವರು ಬಸ್ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಸೇರಿ ರಾಜ್ಯದ ಹಲವೆಡೆ ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ.
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಒಂದು ದಿನದ ಮಟ್ಟಿಗೆ ತಡೆ ನೀಡಿ ಆದೇಶ ಹೊರಡಿಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಸಾರಿಗೆ ನೌಕರರ ನಡುವೆ ಸಂಧಾನ ಸಭೆಯ ವಿವರವನ್ನು ಪೀಠದ ಮುಂದೆ ಇಡುವಂತೆ ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿತ್ತು. ಇದರ ಹೊರತು ಸಾರಿಗೆ ನಿಗಮಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿವೆ.
ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಭಾಗಶಃ ತಟ್ಟಿದೆ. ಹಲವೆಡೆ ಬಸ್ಗಳು ಸಂಚರಿಸುತ್ತಿವೆ. ಏರ್ಪೋರ್ಟ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.
ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಸಾರಿಗೆ ಮುಷ್ಕರದಿಂದಾಗಿ ಬಿಎಂಟಿಸಿ ಬಸ್‌ಗಳ ಸಂಚಾರ ಭಾಗಶಃ ಸ್ಥಗಿತವಾಗಿದೆ. ಹೀಗಾಗಿ, ಬೆಂಗಳೂರು ಒಂದರಲ್ಲೇ 4 ಸಾವಿರ ಖಾಸಗಿ ಬಸ್‌ಗಳನ್ನ ನೀಡುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಸಾರಿಗೆ ಆಯುಕ್ತರು ಬೇಡಿಕೆ ಇಟ್ಟಿದ್ದಾರೆ. ರಾಜ್ಯಾದ್ಯಂತ 11 ಸಾವಿರ ಬಸ್ ಕೇಳಿದ್ದಾರೆ. ಆದರೆ, ಇನ್ನೂ ಅಂತಿಮಗೊಳಿಸಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂದ ನಟರಾಜ್ ಶರ್ಮಾ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬುಧವಾರಕ್ಕೆ ಬಸ್ ನೀಡುವಂತೆ ಕೋರಿದ್ದಾರೆ ಎಂದಿರುವುದು ಹೊಸ ಗೊಂದಲ ಸೃಷ್ಟಿಸಿದೆ.
ಕೋಲಾರ ನಗರದ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಮುಂಜಾನೆಯಿಂದ ಕೋಲಾರದಲ್ಲಿ ಬಸ್ ನಿಲ್ದಾಣ ಸ್ತಬ್ದವಾಗಿತ್ತು. 10 ಗಂಟೆ ವೇಳೆಗೆ ಅಧಿಕಾರಿಗಳು ಒಂದೆರಡು ಬಸ್ಸುಗಳನ್ನು ನಿಲ್ದಾಣಕ್ಕೆ ಕಳುಹಿಸಿದ್ದಾರೆ. ಈ ವೇಳೆ ಕಿಡಿಗೇಡಿಯಿಂದ ಕಲ್ಲು ತೂರಾಟ ನಡೆದಿದ್ದು, ಬಸ್ಸಿನ ಕಿಟಿಕಿ ಗಾಜು ಪುಡಿಯಾಗಿದೆ. ಮೈಸೂರು ನಗರದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರು ಸಂಚರಿಸುತ್ತಿರುವುದು ಕಂಡುಬಂತು. ಮುಷ್ಕರದ ಹಿನ್ನೆಲೆ ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿವೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ವಿವಿಧ ಭಾಗಗಳಲ್ಲಿ ಸಾರಿಗೆ ನೌಕರರ ಮುಷ್ಕರದ ಪರಿಣಾಮವಾಗಿ ಬಸ್ ಸಂಚಾರ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತವಾಗಿದೆ.
ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆ, ಬೆಂಗಳೂರು ಕಡೆಗೆ ತೆರಳುವ ಪ್ರಯಾಣಿಕರು ಬಸ್‌ಗಾಗಿ ತಾಸುಗಟ್ಟಲೆ ಕಾದು ಕಾದು ಸುಸ್ತಾದರು. ಚಾಮರಾಜನಗರ ಬಸ್ ನಿಲ್ದಾಣ, ಡಿಪೋಗೆ ಪೊಲೀಸ್ ಭದ್ರತೆ ನೀಡಲಾಗಿದೆ.ಮಕೂರಿನಲ್ಲೂ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಬಹುತೇಕ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹಾವೇರಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಹುಬ್ಬಳ್ಳಿ, ಶಿವಮೊಗ್ಗ ಮತ್ತು ದಾವಣಗೆರೆ ಸೇರಿ ಅಂತರ್‌ಜಿಲ್ಲೆಗಳಿಗೆ ಮಾತ್ರ ಬಸ್ಗಳು ಸಂಚರಿಸುತ್ತಿದ್ದು, ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಮುಗಿಬೀಳುತ್ತಿದ್ದರು. ತುಮಕೂರಿನಲ್ಲಿ ಬೆಂಗಳೂರಿಗೆ ತೆರಳುವ ಬಸ್ಗಳಿಲ್ಲದೆ ಪ್ರಯಾಣಿಕರು ನಿಲ್ದಾಣಗಳಿಂದ ವಾಪಸ್ ತೆರಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಮುಷ್ಕರದ ಮಾಹಿತಿ ಇಲ್ಲದ ಕೆಲವು ವಾಹನಗಳು ಬೆಂಗಳೂರಿನತ್ತ ತೆರಳುತ್ತಿದ್ದವು. ಮುಷ್ಕರದ ಮಾಹಿತಿ ಇರುವ ಪ್ರಯಾಣಿಕರು ಖಾಸಗಿ ಬಸ್‌ಗಳ ಮೊರೆ ಹೋದರು.
ಸವದತ್ತಿ ಯಲ್ಲಮ್ಮನ ಭಕ್ತರಿಗೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿತು. ಶ್ರಾವಣ ಮಂಗಳವಾರ ಯಲ್ಲಮ್ಮನ ದರ್ಶನಕ್ಕೆ ಹೊರಟ ಭಕ್ತರು ಬಸ್ಗಳಿಲ್ಲದೆ ಪರದಾಡಿದರು. ಅಂತರ್‌ಜಿಲ್ಲಾ ಬಸ್ ಚಾಲಕರು ಹುಬ್ಬಳ್ಳಿವರೆಗೆ ಮಾತ್ರ ಬಸ್ ಬಿಡುತ್ತೇವೆ. ಮುಂದೆ ಸವದತ್ತಿಗೆ ಹೇಗೆ ಹೋಗುತ್ತೀರಿ? ಅಂತ ಚಾಲಕ ತಿಳಿಹೇಳಿದರೂ ಸಹ ಪ್ರಯಾಣಿಕರು ದೇವರ ಮೇಲೆ ಭಾರ ಹಾಕಿ ಬಸ್ ಏರುತ್ತಿದ್ದರು.
ಹುಬ್ಬಳ್ಳಿಗೆ ಬಸ್ ಬಿಡುವಂತೆ ಪ್ರಯಾಣಿಕರು ಒತ್ತಾಯಿಸಿದರು. ಬಸ್ ಹೋಗುವುದಿಲ್ಲ, ಕೆಳಗಿಳೀರಿ ಎಂದು ಮಹಿಳಾ ಕಂಡಕ್ಟರ್‌ವೊಬ್ಬರು ಹೇಳಿದಾಗ ಸಿಟ್ಟಿಗೆದ್ದ ಪ್ರಯಾಣಿಕರು, ಯಾಕೆ ಬಸ್ ಬಿಡುವುದಿಲ್ಲ ಎಂದು ವಾಗ್ವಾದಕ್ಕಿಳಿದರು. ಈ ವೇಳೆ ಸ್ಥಳಕ್ಕೆ ಬಂದ ಕಂಟ್ರೋಲ್ ಜೊತೆಗೂ ಪ್ರಯಾಣಿಕರು ಜಗಳ ಮಾಡಿದರು.
ಶಿವಮೊಗ್ಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಕಂಡುಬಂದವು. ಡಿಪೋದಲ್ಲಿ ಟ್ರೈನಿ ಡ್ರೈವರ್ಸ್ ಹಾಗೂ ಕಂಡಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಾಗರ, ಹೊನ್ನಾಳಿ, ಶಿಕಾರಿಪುರ, ಭದ್ರಾವತಿಗೆ ಬಸ್ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಆದರೆ ಬೆಂಗಳೂರು ಮಾರ್ಗದ ಬಸ್ಗಳು ಸಿಗದೆ ಪ್ರಯಾಣಿಕರಿದೆ ಸಮಸ್ಯೆಯಾಗಿದೆ. ದಾವಣಗೆರೆ ಕೇಂದ್ರ ನಿಲ್ದಾಣಕ್ಕೆ ಬಸ್ಗಳು ಬಾರದೇ ನಿಲ್ದಾಣ ಸ್ತಬ್ಧವಾಗಿದೆ. ದೂರದೂರುಗಳಿಗೆ ಪ್ರಯಾಣಿಸಬೇಕಿರುವ ಜನರು ನಿಲ್ದಾಣದಲ್ಲೇ ಕಾಯುತ್ತಿರುವ ದೃಶ್ಯ ಕಂಡುಬಂದವು.