ಸೇಲಂ : ಅನ್ಯಗ್ರಹ ಜೀವಿಗಳು ಇದ್ದಾರೋ, ಇಲ್ಲವೋ ಎನ್ನುವುದೇ ಇನ್ನೂ ಬಗೆಯಹರಿಯದ ವಿಷಯವಾಗಿದ್ದರೂ, ಇಲ್ಲೊಬ್ಬರು ಏಲಿಯನ್ (ಅನ್ಯಗ್ರಹ ಜೀವಿ)ಗೆ ದೇವಸ್ಥಾನ ನಿರ್ಮಿಸಿ, ಸುದ್ದಿಯಲ್ಲಿದ್ದಾರೆ. ತಮಿಳುನಾಡಿನ ಸೇಲಂ ಮಲ್ಲಮೂಪಂಬಟ್ಟಿಯ ಲೋಗನಾಥನ್ ಏಲಿಯನ್ಗೆ ದೇವಾಲಯ ನಿರ್ಮಿಸಿದವರು.
ಸುಮಾರು ಎಕರೆ ಜಾಗದಲ್ಲಿ ಆಲಯ ನಿರ್ಮಿಸಲಾಗಿದ್ದು, ದೇವಾಲಯದಲ್ಲಿ ನೆಲದಿಂದ 11 ಅಡಿ ಕೆಳಗಿರುವ ನೆಲಮಾಳಿಗೆಯಲ್ಲಿ ಶಿವ, ಪಾರ್ವತಿ, ಮುರುಗನ್, ಕಾಳಿ, ಇತರ ದೇವತೆಗಳ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿರುವ ಅವರು, “ನಾನು ಅನ್ಯಗ್ರಹ ಜೀವಿಗಳ ಜೊತೆ ಮಾತುಕತೆ ನಡೆಸಿ ದೇವಸ್ಥಾನ ನಿರ್ಮಿಸಲು ಅನುಮತಿ ಪಡೆದಿದ್ದೇನೆ. ಇದು ವಿಶ್ವದಲ್ಲೇ ಅನ್ಯಗ್ರಹ ಜೀವಿಗಳಿಗಾಗಿ ನಿರ್ಮಿಸಲಾದ ಮೊದಲ ದೇವಾಲಯ.” ಎಂದು ಹೇಳುತ್ತಾರೆ.
“ಜಗತ್ತಿನಲ್ಲಿ ನೈಸರ್ಗಿಕ ವಿಪತ್ತುಗಳು ಹೆಚ್ಚುತ್ತಿದ್ದು, ಅವುಗಳನ್ನು ತಡೆಯುವ ಶಕ್ತಿ ಏಲಿಯನ್ಗಳಿಗಿದೆ ಎನ್ನುವ ನಂಬಿಕೆ ನನ್ನದು. ನನ್ನ ನಂಬಿಕೆಯಂತೆ ಏಲಿಯನ್ಗಳು ಸಿನಿಮಾಗಳಲ್ಲಿ ಬರುವವರಂತೆ ಇರುವುದಿಲ್ಲ, ಅವರಿಗೆ ಕೊಂಬುಗಳೂ ಇರುವುದಿಲ್ಲ.” ಎಂದು ಹೇಳುವ ಅವರು, ಏಲಿಯನ್ಗಳನ್ನು ಹೇಗೆ ಪೂಜಿಸಬೇಕು ಎಂಬುದಕ್ಕೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಿದ್ದಾರೆ. “ಬಾಳೆ ಎಲೆಯನ್ನು ದೇಹಕ್ಕೆ ಸುತ್ತಿಕೊಂಡರೆ ಅನ್ಯಗ್ರಹ ಜೀವಿಗಳ ವಿಕಿರಣದಿಂದ ಪಾರಾಗಬಹುದು” ಎಂಬ ಹೇಳಿಕೆಗಳನ್ನೂ ಇವರು ನೀಡಿದ್ದಾರೆ.