ವಿಜಯನಗರ ಮೇ 26 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ಎಡಿಜಿಪಿವರೆಗೆ ಮೂರುವರೆ ದಶಕಗಳ ಕಾಲ ಜನಪರ, ದಕ್ಷ ಆಡಳಿತ ನಡೆಸಿದ ಡಾ.ಸುಭಾಷ್ ಭರಣಿ ಅವರು ಬುದ್ಧ ಬಸವ ಅಂಬೇಡ್ಕರ್ ಆಶಯಗಳ ರೂಪಕಶಕ್ತಿ ಎಂದು ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.ಮಂಜುನಾಥ್ ಅವರು ಡಾ.ಸುಭಾಷ್ ಭರಣಿ ಅವರ ಸೇವೆಯನ್ನು ಶ್ಲಾಘಿಸಿದರು .
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಮೋಹನಾಭರಣಿ ಮಹಿಳಾ ಮಂಡಳಿಯ ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜಿನಲ್ಲಿ ಬುದ್ದ ಬಸವ ಅಂಬೇಡ್ಕರ್ ವಿಶ್ವ ಕಲ್ಯಾಣ ಸಂಸ್ಥೆ (ರಿ), ಶ್ರೀ ಶರಣಬಸವ ಬುದ್ದ ಭೀಮಜಿ ವಿದ್ಯಾ ಸಂಸ್ಥೆ, ಹಾಗೂ ಬಳ್ಳಾರಿಯ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ನಿವೃತ್ತ ಎಡಿಜಿಪಿ ಡಾ. ಸುಭಾಷ್ ಭರಣಿ ಅವರ 75ನೇ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾ ಸಭಾದ ರಾಜ್ಯಾಧ್ಯಕ್ಷ ಸಿದ್ದಯ್ಯ ಅವರ 67ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಭರಣಿ ಅವರ ಜೀವನ, ಸಾಧನೆಗಳ ಬಗ್ಗೆ ಮಾತನಾಡಿ, ಚಿಕ್ಕಮಗಳೂರು, ಧಾರವಾಡ ಮತ್ತು ಬಳ್ಳಾರಿಯಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಡಾ. ಭರಣಿ ಅವರ ಜನಮುಖಿ ಕಾರ್ಯಗಳನ್ನು ಜನತೆ ಇಂದಿಗೂ ಕೊಂಡಾಡುತ್ತಿದ್ದಾರೆ ಎಂದರು.
ಬಳ್ಳಾರಿ ಜಿಲ್ಲೆಯ ಕಲ್ಕಂಬ, ಮುದ್ದಟನೂರು ಗ್ರಾಮಗಳಲ್ಲಿ ದಲಿತ ಮಹಿಳೆಯರ ಮೇಲೆ ನಡೆಯುತ್ತಿದ್ದ ಅಮಾನುಷ ಓಕುಳಿ ಚೆಲ್ಲುವ ಪದ್ಧತಿಯನ್ನು ನಿಲ್ಲಿಸಿದ ಕೀರ್ತಿ ಡಾ. ಸುಭಾಷ್ ಭರಣಿ ಅವರಿಗೆ ಸಲ್ಲುತ್ತದೆ ಸಂಶೋಧಕರು ಈ ಕಾರ್ಯವನ್ನು ಕಲ್ಯಾಣ ಕರ್ನಾಟಕದ ಸಾಮಾಜಿಕ ಕ್ರಾಂತಿಗಳಲ್ಲಿ ಒಂದು ಎಂದು ದಾಖಲಿಸಿರುವುದು ಡಾ. ಭರಣಿ ಅವರ ಜನಪರ ನಿಜ ಖಾಳಜಿಯನ್ನು ಪರಿಚಯಿಸುತ್ತದೆ ಎಂದರು.
ಡಾ.ಭರಣಿ ಅವರ ಯಶಸ್ವಿ ಸಾಮಾಜಿಕ ಬದುಕಿನ ಹಿಂದೆ ಪತ್ನಿ ಮೋಹನಾ ಭರಣಿ ಅವರು ಇದ್ದಾರೆ ಎಂದು ಅವರು ಹೇಳಿದರು.
ದಕ್ಷ ಆಡಳಿತ ಜತೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ದಿನಗಳಲ್ಲಿ ಸಾಹಿತಿಗಳು, ಪತ್ರಕರ್ತರು, ಕಲಾವಿದರು, ಜನಪದ ಗಾಯಕರ ಮನಸ್ಸನ್ನು ಗೆದ್ದಿದ್ದ ಡಾ. ಭರಣಿ ಅವರ ಕಾರ್ಯಗಳು ಇಂದಿನ ಹಿರಿಯ ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಬಸವ ಬುದ್ದ ಭೀಮಜಿ ವಿದ್ಯಾಸಂಸ್ಥೆ (ರಿ)ಯ ಸಂಸ್ಥಾಪಕ- ಕಾರ್ಯದರ್ಶಿಗಳಾದ ಗುಂಡಗತ್ತಿ ಕೆ.ಕೊಟ್ರಪ್ಪ ಅವರು ಮಾತನಾಡಿ, ದಕ್ಷತೆಗೆ ಹೆಸರಾಗಿದ್ದ ಡಾ. ಸುಭಾಷ್ ಭರಣಿ ಮತ್ತು ಸಿದ್ದಯ್ಯ ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಹಾಗೂ ಅವರಂತೆ ವೃತ್ತಿ ಜೊತೆಗೆ ಸಾಮಾಜಿಕ ಸೇವೆಯನ್ನು ಪ್ರವೃತ್ತಿಯನ್ನು ಮೈಗೂಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಮುಂದಿನ ವರ್ಷವೂ ಉಭಯರ ಜನ್ಮ ದಿನಾಚರಣೆಯನ್ನು ರಕ್ತದಾನ ಶಿಬಿರ ಸೇರಿದಂತೆ ಜನಪಯೋಗಿ ಕಾರ್ಯಗಳನ್ನು ನಾಲ್ಕು ಸಂಸ್ಥೆಗಳು ಹಮ್ಮಿಕೊಳ್ಳಲಿವೆ ಎಂದರು.
ಕರ್ನಾಟಕ ರಾಜ್ಯ ಛಲವಾದಿ ಮಹಿಳಾ ಮಹಾಸಭಾ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಡಾ. ಈರಮ್ಮ ಅವರು ಸಿದ್ದಯ್ಯ ಅವರ ಬಾಲ್ಯ ಶಿಕ್ಷಣ ಹಾಗೂ ಸರ್ಕಾರದ ಸೇವಾ ಕಾರ್ಯಗಳ ಕುರಿತು ಮಾತನಾಡಿ ಸಿದ್ದಯ್ಯ ಅವರು ಕಾರ್ಯನಿರ್ವಹಿಸಿದ ಎಲ್ಲಾ ಇಲಾಖೆಗಳಲ್ಲೂ ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಜನಮನ ಗೆದ್ದಿದ್ದಾರೆ ಎಂದು ತಿಳಿಸಿದರು.
ನಾಡಿನ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಾಟೇಲ್, ಧರ್ಮಸಿಂಗ್ ಹಾಗೂ ಬಿಮ ಎಸ್. ಯಡಿಯೂರಪ್ಪ ಅವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿದ ಹೆಗ್ಗಳಿಕೆ ಹೊಂದಿರುವ ಸಿದ್ದಯ್ಯ ಅವರು ವಿಶೇಷವಾಗಿ ಬಿ.ಬಿ.ಎಂ.ಪಿ ಆಯುಕ್ತರಾಗಿದ್ದಾಗ ಕಸವಿಲೇವಾರಿಗಾಗಿ ಮೂರು ಗಾಲಿಯ ಗಾಡಿ ಸೇವೆಯನ್ನು ಪ್ರಾರಂಭಿಸಿ ಗಮನ ಸೆಳೆದಿದ್ದರು ಎಂದು ಹೇಳಿದರು.
ನಿವೃತ್ತಿ ಬಳಿಕವೂ ವಿಶ್ರಾಂತಿ ಪಡೆಯದೇ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಶೋಷಿತ ಸಮುದಾಯಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯರೂ ಆಗಿರುವ ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಅವರು ಉದ್ಘಾಟಿಸಿದರು.
ಪ್ರತಿಭಾ ಪುರಸ್ಕಾರ : ಇದೇ ಸಂದರ್ಭದಲ್ಲಿ ಡಾ.ಭರಣಿ ಮತ್ತು ಸಿದ್ಧಯ್ಯಅವರ ಜನ್ಮ ದಿನಾಚರಣೆ ಅಂಗವಾಗಿ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಮಾರ್ಚ್-೨೦೨೫ ರ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಹಾಗೂ ಐ.ಟಿ.ಐ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಲಾ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಪ್ರಾಚಾರ್ಯರಾದ ಆರ್.ಹೆಚ್ ಕಲ್ಯಾಣದವರ್, ಬಿ.ಶಾಂತ ಕುಮಾರ್, ಬಸವಂತಪ್ಪ, ಸಿಎಂಎಸ್ ಮುಖಂಡ ಕಮಲಾಪುರದ ಸಣ್ಣೀರಪ್ಪ, ಉಪನ್ಯಾಸಕರಾದ ಡಾ. ಸಿ.ಅಜ್ಜಯ್ಯ ಹಾಗೂ ನಿಸರ್ಗ ಪ.ಪೂ.ಕಾಲೇಜು, ನಿಸರ್ಗ ಐ.ಟಿ.ಐ ಕಾಲೇಜು, ಹೇಮರೆಡ್ಡಿ ಮಲ್ಲಮ್ಮ ಐ.ಟಿ.ಐ ಕಾಲೇಜು ಹಾಗೂ ಶಾಂತಿ ನಿಕೇತನ ಪ್ರೌಢ ಶಾಲೆಯ ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.
ಉಪ ಪ್ರಾಚಾರ್ಯ ಮೋಹನ ಹೆಚ್. ಸ್ವಾಗತಿಸಿದರು. ಉಪನ್ಯಾಸಕ ಜಿ.ವೆಂಕಟೇಶ ನಿರೂಪಿಸಿದರು. ಉಪನ್ಯಾಸಕ ಎ.ಮಂಜುನಾಥ ವಂದಿಸಿದರು.