ಶಿವಮೊಗ್ಗ06: ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 25 ಸಾವಿರ ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಲಪಟಾಯಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆರೋಪಿಸಿದ್ದಾರೆ.
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ 25,396 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಲಪಟಾಯಿಸಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ವಿಧಾನಸಭಾ ಚುನಾವಣಾ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಬಹುಶಃ ಈಗ 2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನು ಅವರು ಮರೆತಿದ್ದಾರೆ ಎಂಬುದು ನನ್ನ ಭಾವನೆ. ಸರ್ಕಾರ ಅಭಿವೃದ್ಧಿ ಹೊಂದಿಲ್ಲ. ಬರದ ಕುರಿತು ಜನರ ಗಮನ ಸೆಳೆದು ಮತ ಗಳಿಸಬಹುದು ಎಂಬ ಭ್ರಮೆಯಲ್ಲಿದೆ. ಕಾಂಗ್ರೆಸ್ ಸುಳ್ಳಿನ ಆಧಾರದ ಮೇಲೆ ಚುನಾವಣೆ ನಡೆಸುತ್ತಿದೆ. ಅವರಿಗೆ ಅಭಿವೃದ್ಧಿಯ ಬೆಂಬಲ ಕೂಡ ಇಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಅದರ ಬಗ್ಗೆ ವಿಶ್ವಾಸವನ್ನು ಹೊಂದಿಲ್ಲ, ಜನರು ಮೋದಿ ಗ್ಯಾರಂಟಿ ನಂಬಿದ್ದಾರೆ. ಯಾವುದೇ ಗ್ಯಾರಂಟಿ ಈ ಬಾರಿಯ ಚುನಾವಣೆಯಲ್ಲಿ ಲಾಭ ಆಗಲ್ಲ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನಮ್ಮ ಪ್ರಚಾರ ಕಾರ್ಯಕ್ರಮದಲ್ಲಿ ಶೇ. 70 ರಷ್ಟು ಮಹಿಳೆಯರು ಬರುತ್ತಿದ್ದಾರೆ. ಇದು ನಮಗೆ ದೊಡ್ಡ ಶಕ್ತಿಯನ್ನು ಕೊಟ್ಟಿದೆ ಎಂಬುದು ನಮ್ಮ ಭಾವನೆ ಎಂದು ತಿಳಿಸಿದರು.
ಹಾಸನದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಗೆಲುವಿನ ನಿರೀಕ್ಷೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಮೈತ್ರಿ ಅಖಂಡವಾಗಿದೆ ಎಂದರು.
ಭಾರತ ಆರ್ಥಿಕವಾಗಿ ಬಲಿಷ್ಠವಾಗಿದೆ. ಈಗ ಬಿಜೆಪಿ 24X7 ಕೆಲಸ ಮಾಡುತ್ತಿದೆ. 2 ಕೋಟಿ ಉದ್ಯೋಗದ ಬಗ್ಗೆ ಪದೇ ಪದೆ ಅಂಕಿ ಅಂಶವಿಲ್ಲದೆ, ಪ್ರಶ್ನೆ ಮಾಡುವ ಬದಲು ಮಾಹಿತಿ ಇಲ್ಲದೆ ಕಾಂಗ್ರೆಸ್ನವರು ಮಾತನಾಡುತ್ತಿದ್ದಾರೆ. 7 ಕೋಟಿ ಹೊಸ ಉದ್ಯೋಗಗಳು ಸೇರ್ಪಡೆಯಾಗಿವೆ. 370 ಕಾಯ್ದೆ ರದ್ದು ಮಾಡಿದೆ. ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದರೆ 370 ಅನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ. ಅದನ್ನು ಪ್ರೆಸ್ಮಿಟ್ ಮಾಡಿ ಹೇಳಬೇಕಿದೆ ಎಂದರು.
ಓಬಿಸಿಯ ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುವುದಾಗಿ ಕಾಂಗ್ರೆಸ್ ನಿರ್ಧರಿಸಿತ್ತು. 10 ವರ್ಷ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ಈಗ ಮತ್ತೆ ಅಧಿಕಾರಕ್ಕೆ ಬಂದು, ಹಿಂದೆ 2ಜಿ ಹಗರಣ ಮಾಡಿದಂತೆ ಮತ್ತೆ ಹಗರಣ ಮಾಡಲು ನಿರ್ಧರಿಸಿದಂತೆ ಇದೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರ ಬಗ್ಗೆ ಚಿಂತನೆ ನಡೆಸದ ಬೇಜವಾಬ್ದಾರಿ ಸರ್ಕಾರವಿದೆ. ಎಸ್ಸಿ/ ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ 2396 ಕೋಟಿ ರೂ. ಅನ್ನು ನುಂಗಿ ನೀರು ಕುಡಿದಿದೆ. 25 ಪಕ್ಷಗಳ ಒಕ್ಕೂಟದವರು ವರ್ಷಕ್ಕೆ ಒಬ್ಬರಂತೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.