ಧಾರವಾಡ: ವೇತನ ಪರಿಷ್ಕರಣೆ ಹಾಗೂ ಬಾಕಿ ವೇತನ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಇಂದು ಬಸ್‌ಗಳನ್ನು ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ. ಈ ಬಂದ್ ಬಿಸಿ ಧಾರವಾಡದ ಪ್ರಯಾಣಿಕರಿಗೆ ಅಕ್ಷರಶಃ ತಟ್ಟಿದೆ.
ಧಾರವಾಡದ ಹೊಸ ಬಸ್ ನಿಲ್ದಾಣ, ಬಿಆರ್‌ಟಿಎಸ್ ನಿಲ್ದಾಣ, ಹಳೇ ಬಸ್ ನಿಲ್ದಾಣದಿಂದ ಕೆಲವು ಬಸ್ ಗಳು ಹೊರಗೆ ಬಿದ್ದಿಲ್ಲ. ಇದರಿಂದಾಗಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಳು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ. ಧಾರವಾಡದ ಡಿಪೊ ಹಾಗೂ ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಕಾ ಅವರು ಪರಿಸ್ಥಿತಿ ಅವಲೋಕಿಸಿದರು.
ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ೯ ವಿಭಾಗಗಳಿವೆ. ೬ ಜಿಲ್ಲೆಗಳಲ್ಲಿ ಬಸ್ ಸಂಚಾರ ಮಾಡಲಿವೆ. ಬೆಳಿಗ್ಗೆಯಿಂದಲೇ ಬಸ್ ಸಂಚಾರಕ್ಕೆ ಒತ್ತು ನೀಡಲಾಗಿತ್ತು. ನೌಕರರಿಗೂ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಲಾಗಿತ್ತು. ಬಿಆರ್‌ಟಿಎಸ್ ಸಿಬ್ಬಂದಿ ಕೂಡ ಕೆಲಸಕ್ಕೆ ಬಂದಿಲ್ಲ. ಕರ್ತವ್ಯಕ್ಕೆ ಹಾಜರಾಗಲೇಬೇಕು ಎಂದು ನಾವು ಸೂಚನೆ ಕೊಟ್ಟಿದ್ದೆವು. ಇವತ್ತು ಹೈಕೋರ್ಟ್‌ನಲ್ಲಿ ನೌಕರರ ಬೇಡಿಕೆ ಸಂಬಂಧ ವಿಚಾರಣೆ ಇದೆ. ಈ ರೀತಿ ಪ್ರತಿಭಟನೆ ಮಾಡುವುದು ಸರಿಯಲ್ಲ. ನೌಕರರು ಇನ್ನು ಮೇಲಾದರೂ ಕರ್ತವ್ಯಕ್ಕೆ ಬರುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಒಟ್ಟಾರೆ ಧಾರವಾಡದಲ್ಲಿ ಬಸ್ ಬಂದ್ ಬಿಸಿ ಮುಟ್ಟಿದ್ದು, ಖಾಸಗಿ ಬಸ್‌ಗಳ ಓಡಾಟ ಜೋರಾಗಿ ನಡೆದಿದೆ. ಬಿಆರ್‌ಟಿಎಸ್ ಬಸ್‌ಗಳೂ ರಸ್ತೆಗಿಳಿಯದಿದ್ದರಿಂದ ಪ್ರಯಾಣಿಕರು ಅಕ್ಷರಶಃ ತೊಂದರೆಗೀಡಾಗಿದ್ದಾರೆ.