ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆಸಿಆರ್ ಪುತ್ರಿ ಹಾಗೂ ಹಿರಿಯ ಬಿಆರ್ ಎಸ್ ನಾಯಕಿ ಕೆ.ಕವಿತಾ ಅವರಿಗೆ ಅನಾರೋಗ್ಯ ಕಾಡಿದ್ದು, ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯದ ಕುರಿತು ವರದಿ ಬಂದ ಬಳಿಕ ಆಸ್ಪತ್ರೆಯಲ್ಲೇ ಸ್ವಲ್ಪ ದಿನ ಇರಬೇಕೇ ಅಥವಾ ಮನೆಗೆ ಕಳುಹಿಸಬೇಕೆ ಎನ್ನುವ ಕುರಿತು ವೈದ್ಯರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕವಿತಾ ದೆಹಲಿ ಮದ್ಯ ನೀತಿಯ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದಾಗ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಕೆ ಕವಿತಾ ಅವರನ್ನು ಮಾರ್ಚ್ 15, 2024 ರಂದು ಇಡಿ ಮತ್ತು ಏಪ್ರಿಲ್ 11, 2024 ರಂದು ಸಿಬಿಐ ಬಂಧಿಸಿತ್ತು. ಇತ್ತೀಚೆಗೆ, ಜಾರಿ ನಿರ್ದೇಶನಾಲಯ (ಇಡಿ) ಅಬಕಾರಿ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು, ಬಿಆರ್ಎಸ್ ನಾಯಕಿ ಕೆ ಕವಿತಾ ಮತ್ತು ಇತರ ಆರೋಪಿಗಳಾದ ಚನ್ಪ್ರೀತ್ ಸಿಂಗ್, ದಾಮೋದರ್, ಪ್ರಿನ್ಸ್ ಸಿಂಗ್ ಮತ್ತು ಅರವಿಂದ್ ಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಆಕೆಗೆ ಜಾಮೀನು ನೀಡಿದೆ. ದೆಹಲಿ ಮದ್ಯ ನೀತಿ ಹಗರಣದಲ್ಲಿ 1,100 ಕೋಟಿ ರೂ. ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ಗೂ ಜಾಮೀನು ಸಿಕ್ಕಿದೆ. ಲೋಕಸಭೆ ಚುನಾವಣೆ 2024ರ ಸಂದರ್ಭದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಲು ಮಾತ್ರ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲು ವಿಶೇಷ ಅವಕಾಶ ನೀಡಲಾಗಿತ್ತು