ನವದೆಹಲಿ,ಏಪ್ರಿಲ್ 11: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಸಿಬಿಐ ಬಂಧಿಸಿದೆ.
ಜಾರಿ ನಿರ್ದೇಶನಾಲಯ ಬಂಧಿಸಿದ ಬಳಿಕ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿಯನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಶನಿವಾರ ಆಕೆಯನ್ನು ಸಿಬಿಐ ಜೈಲಿನೊಳಗೆ ವಿಚಾರಣೆಗೊಳಪಡಿಸಿತ್ತು, ಇಂದು ಬಂಧಿಸಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರವೇ (ಏಪ್ರಿಲ್ 8) ಕವಿತಾ ಅವರಿಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು, ಪ್ರಾಥಮಿಕ ದೃಷ್ಟಿಯಲ್ಲಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ತೋರುತ್ತದೆ ಎಂದು ವಕೀಲರು ಹೇಳಿದ್ದರು.
ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ 6 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಆ ಬಳಿಕ ಇಂದು ತಿಹಾರ್ ಜೈಲಿನಿಂದ ಕೆ. ಕವಿತಾ ಬಂಧಿಸಲಾಗಿದೆ. ಬಿಆರ್‌ಎಸ್ ನಾಯಕ ಕೆ. ಕವಿತಾ ಅವರನ್ನು ತಿಹಾರ್ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಏಪ್ರಿಲ್ 5 ರಂದು ಕವಿತಾ ಅವರನ್ನು ಜೈಲಿನಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ಸಿಬಿಐಗೆ ಅನುಮತಿ ನೀಡಿತ್ತು.
ಇದಲ್ಲದೇ ಸಾಕ್ಷ್ಯ ನಾಶಪಡಿಸುವ ಪ್ರಯತ್ನವೂ ನಡೆದಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಪರಿಹಾರವನ್ನು ನೀಡಿದರೆ ಅವರು ಭವಿಷ್ಯದಲ್ಲಿಯೂ ಇದನ್ನು ಮಾಡಬಹುದು ಎಂದಿದ್ದರು.
ಮದ್ಯದ ಪರವಾನಗಿಯಲ್ಲಿ ಹೆಚ್ಚಿನ ಪಾಲು ಪಡೆಯಲು ದೆಹಲಿಯ ಆಡಳಿತ ಪಕ್ಷ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 100 ಕೋಟಿ ರೂಪಾಯಿ ಲಂಚ ನೀಡಿದ ಆರೋಪ ಹೊತ್ತಿರುವ ಕೆ ಕವಿತಾ ಸೌತ್ ಗ್ರೂಪ್‌ನ ಪ್ರಮುಖ ಸದಸ್ಯೆ ಎಂದು ಇಡಿ ಹೇಳಿದೆ.
ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾರೆ.
ಮದ್ಯದ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿಕೊಂಡಿದೆ. ಕೇಜ್ರಿವಾಲ್ ಅವರನ್ನು ಪ್ರಕರಣದ ಪ್ರಮುಖ ಕಿಂಗ್ಪಿನ್ ಎಂದು ಇಡಿ ಬಣ್ಣಿಸಿದೆ