ಧಾರವಾಡ: ಕಳೆದ ಒಂದು ತಿಂಗಳಿನಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ಕ್ಷೀಪ್ರಗತಿಯಲ್ಲಿ ನಡೆಯುತ್ತಿದೆ. 120 ದಿನಗಳ ಕಾಲಾವಧಿಯಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬುದನ್ನು ಈ ಮೊದಲೇ ಸಾರ್ವಜನಿಕರಿಗೆ ತಿಳಿಸಲಾಗಿತ್ತು. ಅದರಂತೆ ಏಪ್ರೀಲ್ 20 ರಿಂದ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಸಂಚಾರ ದಟ್ಟಣೆ ಆಗದಂತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ನಿಗದಿತ ಕಾಲಮಿತಿಗಿಂತ ವೇಗವಾಗಿ ಕಾಮಗಾರಿ ಭರದಿಂದ ಸಾಗುತ್ತಿದೆ. ಗುಣಮಟ್ಟದ ಕಾಮಗಾರಿ, ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವಿವಿದ ರಸ್ತೆ ಕಾಮಗಾರಿಗಳು ನಡೆಯಬೇಕಿವೆ. ಹಳೆ ಬಸ್ ನಿಲ್ದಾಣ ಎದುರಿನ ಸ್ಥಳದಲ್ಲಿ ಫಿಲ್ಲರ್ ಅಳವಡಿಸಬೇಕಿದೆ. ಕಾಮಗಾರಿಗೆ ಅವಶ್ಯವಿರುವ ಕಾರ್ಮಿಕರನ್ನು ಈಗಾಗಲೇ ಹೊಂದಲಾಗಿದೆ. 4 ಫಿಲ್ಲರ್ಗಳು ಮುಕ್ತಾಯಗೊಂಡಿದ್ದು, 2 ಫಿಲ್ಲರ್ಗಳು ಬಾಕಿಯಿವೆ. ಸ್ಲಾಬ್ಗಳನ್ನು ಹಾಕಲಾಗುತ್ತಿದೆ. ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಸಾರ್ವಜನಿಕರಿಗೆ ನೀಡಲಾಗಿತ್ತು. ಅದರಂತೆ ಕೆಲಸಗಳು ಭರದಿಂದ ಸಾಗಿವೆ. ಶೀಘ್ರಗತಿಯಲ್ಲಿ ಕಾಮಗಾರಿ ಮುಕ್ತಾಯಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುವುದು ಎಂದು ಅವರು ತಿಳಿಸಿದರು.
ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಮೇಲ್ಸೇತುವೆ ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಒಂದು ಹಂತದ ಕಾಮಗಾರಿಗೆ ಮುಕ್ತಾಯವಾದ ನಂತರ ಇನ್ನೊಂದು ಹಂತದ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ನಿಗದಿತ ಕಾಲಾವಧಿಯಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಟ್ರಾಫಿಕ್ ವ್ಯವಸ್ಥೆ ನಿರ್ವಹಣೆಯೇ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಒಂದು ಹಂತದ ಕಾಮಗಾರಿ ಮುಗಿದ ಬಳಿಕ ಇನ್ನೊಂದು ಹಂತದ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತ ಟಿ.ಪ್ರದೀಪ್, ಡಿಸಿಪಿ ರವೀಶ ಸಿ.ಆರ್., ಮಹಾನಗರಪಾಲಿಕೆ ಅಧೀಕ್ಷಕ ಅಭಿಯಂತರ ವಿಜಯಕುಮಾರ, ಎಚ್.ಜಿ.ಗುಂಡೊಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಇತರರು ಹಾಜರಿದ್ದರು.