ಮಧುರೈ, ಅಕ್ಟೋಬರ್ 09: ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಭದ್ರತಾ ತಪಾಸಣೆ ನಡೆಸಲಾಯಿತು. ಆವರಣವನ್ನು ಪರಿಶೀಲಿಸಲು ಸ್ನಿಫರ್ ಶ್ವಾನಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲಾಗಿತ್ತು.ವಿಮಾನ ನಿಲ್ದಾಣದೊಳಗೆ ಬಾಂಬ್ ಇರಿಸಲಾಗಿದೆ ಎಂದು ಮಧುರೈ ವಿಮಾನ ನಿಲ್ದಾಣ ನಿರ್ದೇಶಕರಿಗೆ ಇಮೇಲ್ ಬಂದಿತ್ತು.
ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಒಳಗೆ ಬಿಡುವ ಮೊದಲು ಬಾಂಬ್ ನಿಷ್ಕ್ರಿಯ ದಳವು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿತು. ಸ್ನಿಫರ್ ನಾಯಿಗಳನ್ನು ನಿಯೋಜಿಸಲಾಗಿತ್ತು. ಇದಕ್ಕೂ ಮೊದಲು, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (RGIA) ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಬಂದಿತ್ತು.
ಬೆಳಗ್ಗೆ 6 ಗಂಟೆ ಸುಮಾರಿಗೆ ಬಂದ ಅನಾಮಧೇಯ ಇಮೇಲ್‌ನಲ್ಲಿ, ವಿಮಾನ ನಿಲ್ದಾಣದಲ್ಲಿ ಮತ್ತು ಹೈದರಾಬಾದ್‌ನಾದ್ಯಂತ ಹಲವಾರು ಶಾಲೆಗಳಲ್ಲಿ ಸ್ಫೋಟಕಗಳನ್ನು ಇಡಲಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭದ್ರತಾ ತಂಡಗಳು ವಿಮಾನ ನಿಲ್ದಾಣದ ಆವರಣದಾದ್ಯಂತ ತಪಾಸಣೆಗಳನ್ನು ನಡೆಸಿದವು.