ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಇಂದು ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಯಿತು. ವಿಷಯ ತಿಳಿದ ತಕ್ಷಣ ಅಧಿಕಾರಿಗಳು ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ನಿರ್ಗಮನ ಬಾಗಿಲುಗಳ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಿದರು ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ದೆಹಲಿಯ ಟಿ2 (ಟರ್ಮಿನಲ್)ನಿಂದ ಈ ವಿಮಾನ ಬೆಳಿಗ್ಗೆ 5.30ರ ಸುಮಾರಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಬೆದರಿಕೆ ಬಂದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೂಡಲೇ ಸ್ಥಳಾಂತರಿಸಲಾಯಿತು. ಬಳಿಕ ವಿಮಾನವನ್ನು ಪ್ರತ್ಯೇಕ ಪ್ರದೇಶಕ್ಕೆ ಕೊಂಡೊಯ್ಯಲಾಯಿತು. ಬಾಂಬ್ ಸ್ಕ್ವಾಡ್ ಮತ್ತು ಸಿಐಎಸ್‌ಎಫ್ ತಂಡವನ್ನು ಸ್ಥಳಕ್ಕೆ ಕರೆಸಿ ಶೋಧ ನಡೆಸಿದ್ದು, ಹುಸಿ ಬೆದರಿಕೆ ಎಂಬುದು ಖಚಿತಯಿತು ಎಂದು ಅಧಿಕಾರಿಗಳು ತಿಳಿಸಿದರು.
ಈ ಬಗ್ಗೆ ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ”ವಿಮಾನದಲ್ಲಿ ಟಿಶ್ಯೂ ಪೇಪರ್ ಮೇಲೆ ಬಾಂಬ್ ಇಟ್ಟಿರುವ ಬಗ್ಗೆ ಬರೆದಿರುವುದು ಪತ್ತೆಯಾಗಿದೆ. ತನಿಖೆ ನಡೆಸಿದಾಗ ಅಂಥದ್ದೇನೂ ಇಲ್ಲ ಎಂಬುದು ಗೊತ್ತಾಯಿತು” ಎಂದರು.